ಕಾಠ್ಮಂಡು: ಯುವ ರಾಜಕಾರಣಿ ಬಾಲೇಂದ್ರ ಶಾ ಅವರು ನಾಲ್ಕು ಬಾರಿ ಪ್ರಧಾನಿಯಾಗಿದ್ದ 74 ವರ್ಷದ ಕೆ.ಪಿ. ಶರ್ಮಾ ಒಲಿ ಅವರನ್ನು ಸುಮಾರು 50 ಸಾವಿರ ಮತಗಳ ಭಾರಿ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಜೊತೆಗೆ, ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷವು (ಆರ್‌ಎಸ್‌ಪಿ) ಭಾರಿ ಗೆಲುವಿನತ್ತ ಮುನ್ನುಗ್ಗುತ್ತಿದೆ.
ಮೇಯರ್ ಆಗಿದ್ದವರೊಬ್ಬರು ಪ್ರಧಾನಿ ಹುದ್ದೆಗೆ ಏರುವ ಸನಿಹದಲ್ಲಿ ಇರುವುದು ನೇಪಾಳದ ಇತ್ತೀಚಿನ ರಾಜಕಾರಣ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖ ಬದಲಾವಣೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ಆಯೋಗವು ಫಲಿತಾಂಶದ ವಿವರ ನೀಡಿದ್ದು, ಶನಿವಾರದ ಸಂಜೆವರೆಗೆ ಆರ್‌ಎಸ್‌ಪಿ ಪಕ್ಷವು 62 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಇಲ್ಲಿಯವರೆಗೆ ಒಟ್ಟು 78 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಮತ ಎಣಿಕೆ ನಡೆಯುತ್ತಿರುವ ಉಳಿದ ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿದೆ.
'ಮತ ಎಣಿಕೆಯು ಸೋಮವಾರ ಪೂರ್ಣಗೊಳ್ಳಬಹುದು. ಮತದಾನ ನಡೆದ ಒಟ್ಟು 165 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳು ಗೆದ್ದುಕೊಂಡ ಸ್ಥಾನಗಳ ಪ್ರಮಾಣಕ್ಕೆ ಅನುಗುಣವಾಗಿ ಉಳಿದ 110 ಕ್ಷೇತ್ರಗಳನ್ನು ಆಯಾ ಪಕ್ಷಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಗೆ ಇನ್ನಷ್ಟು ದಿನಗಳು ಹಿಡಿಯಬಹುದು' ಎಂದು ಆಯೋಗ ಹೇಳಿದೆ.

