ನ್ಯೂಯಾರ್ಕ್ : 'ನಕಲಿ ದರೋಡೆ' ಪ್ರಕರಣಗಳ ಸಂತ್ರಸ್ತರೆಂದು ಬಿಂಬಿಸಿಕೊಂಡು ಅಕ್ರಮವಾಗಿ ವೀಸಾ ಪಡೆಯಲು ಸಂಚು ರೂಪಿಸಿದ್ದ ಆರೋಪದ ಮೇಲೆ 11 ಭಾರತೀಯರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಈ ಆರೋಪಿಗಳು, ಅಮೆರಿಕದ 'ಯು' ವೀಸಾ (ಅಪರಾಧಕ್ಕೆ ಒಳಗಾದ ಸಂತ್ರಸ್ತರಿಗೆ ನೀಡುವ ವೀಸಾ) ಪಡೆಯುವ ಉದ್ದೇಶದಿಂದ ನಕಲಿ ದರೋಡೆಯ ಕಥೆ ಕಟ್ಟಿ, ತಾವು ಸಂತ್ರಸ್ತರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಆ ಮೂಲಕ ಕಾನೂನುಬದ್ಧವಾಗಿ ಅಮೆರಿಕದಲ್ಲಿ ನೆಲಸಲು ಯೋಜಿಸಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಜಿತೇಂದ್ರಕುಮಾರ್ ಪಟೇಲ್ (39), ಮಹೇಶ್‌ಕುಮಾರ್ ಪಟೇಲ್ (36), ಸಂಜಯ್‌ಕುಮಾರ್ ಪಟೇಲ್ (45), ದೀಪಿಕಾಬೆನ್ ಪಟೇಲ್ (40), ರಮೇಶ್‌ಭಾಯ್ ಪಟೇಲ್ (52), ಅಮಿತಾಬೆನ್ ಪಟೇಲ್ (43), ರೋನಕ್‌ಕುಮಾರ್ ಪಟೇಲ್ (28), ಸಂಗೀತಾಬೆನ್ ಪಟೇಲ್ (36), ಮಿಂಕೇಶ್ ಪಟೇಲ್ (42), ಸೋನಲ್ ಪಟೇಲ್ (42) ಮತ್ತು ಮಿತುಲ್ ಪಟೇಲ್ (40) ವಿರುದ್ಧ ವೀಸಾ ಪಡೆಯುವ ಉದ್ದೇಶದಿಂದ ವಂಚನೆ ಮಾಡಿರುವ ಆರೋಪ ಹೊರಿಸಲಾಗಿದೆ.

