ಟೆಹರಾನ್: ಇರಾನ್ ಶಾಲೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಅಮೆರಿಕ ನಡೆಸಿದ 'ತಮಾಹಾಕ್' ಕ್ಷಿಪಣಿ ದಾಳಿಯೇ ಕಾರಣ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆವೊಲ್ಯೂಷನರಿ ಗಾರ್ಡ್ ಸೇನಾ ನೆಲೆಯನ್ನು ಗುರಿಯಾಗಿಸಿ ಅಮೆರಿಕ ಕ್ಷಿಪಣಿ ದಾಳಿ ನಡೆಸಿತ್ತು. ಆದರೆ, ಪಕ್ಕದಲ್ಲೇ ಇದ್ದ ಶಾಲೆಗೆ ಕ್ಷಿಪಣಿ ಅಪ್ಪಳಿಸಿತ್ತು ಎಂದು ಅವರು ವಿವರಿಸಿದ್ದಾರೆ.
ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಗುಪ್ತಚರ ಸಂಸ್ಥೆ ಒದಗಿಸಿದ ಹಳೆಯ ಡೇಟಾವನ್ನು ಅಮೆರಿಕ ಸೇನೆ ಏಕೆ ಮರುಪರಿಶೀಲಿಸಲಿಲ್ಲ ಎಂಬುದೂ ಸೇರಿದಂತೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ ಎಂದು ಅಧಿಕಾರಿಗಳು ಹೇಳಿರುವುದಾಗಿ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಫೆಬ್ರುವರಿ 28ರಂದು ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಶಜರೆಹ್ ತಯ್ಯೆಬೆಹ್ ಬಾಲಕಿಯರ ಶಾಲೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿತ್ತು.
ಘಟನೆ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಇರಾನ್‌ನ ರಾಯಭಾರಿ ಅಲಿ ಬಹ್ರೇನಿ, 'ಶಾಲೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ 150 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ' ಎಂದು ಹೇಳಿದ್ದರು. ಕ್ರಮೇಣ ಮೃತಪಟ್ಟರ ಸಂಖ್ಯೆ 165ಕ್ಕೇರಿಕೆಯಾಗಿತ್ತು. ಮೃತರಲ್ಲಿ ಹೆಚ್ಚಿನವರು 7ರಿಂದ 12 ವರ್ಷದ ಬಾಲಕಿಯರಾಗಿದ್ದು, 95ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ತರಗತಿಗಳು ಪ್ರಾರಂಭವಾದ ಕೆಲವೇ ಹೊತ್ತಿನಲ್ಲಿ ಶಾಲೆ ಮೇಲೆ ಕ್ಷಿಪಣಿ ಅಪ್ಪಳಿಸಿತ್ತು. ಇದರಿಂದಾಗಿ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು. ಗುಪ್ತಚರ ಸಂಸ್ಥೆ ಒದಗಿಸಿದ ಹಳೆಯ ಡೇಟಾವನ್ನು ಬಳಸಿಕೊಂಡು ಅಮೆರಿಕ ಸೆಂಟ್ರಲ್ ಕಮಾಂಡ್ ದಾಳಿ ನಡೆಸಲು ನಿರ್ದೇಶಿಸಿತ್ತು. ಇದೇ ಡೇಟಾ ಆಧರಿಸಿ ಅಮೆರಿಕ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ದೊಡ್ಡ ಅನಾಹುತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
165 ಮಂದಿಯ ಸಾವಿಗೆ ಕಾರಣವಾದ ಸ್ಫೋಟಕ್ಕೆ ಇರಾನ್ ದೇಶವೇ ಹೊಣೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಆದರೆ, ಸ್ಫೋಟಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ವಿಡಿಯೊವು ಟ್ರಂಪ್ ಅವರ ಹೇಳಿಕೆಗೆ ವ್ಯತಿರಿಕ್ತವಾಗಿದೆ ಎಂದು ತನಿಖಾ ಸಂಸ್ಥೆ ಬೆಲ್ಲಿಂಗ್‌ಕ್ಯಾಟ್ ವಿಶ್ಲೇಷಿಸಿತ್ತು.
ಶಾಲೆಯ ಮೇಲೆ ಬಿದ್ದ ಯುದ್ಧಸಾಮಗ್ರಿಯನ್ನು 'ತಮಾಹಾಕ್' ಕ್ರೂಸ್ ಕ್ಷಿಪಣಿ ಎಂದು ಗುರುತಿಸಲಾಗಿದೆ. ಅಮೆರಿಕದ ಬಳಿ ಮಾತ್ರ ಈ ಮಾದರಿಯ ಕ್ಷಿಪಣಿ ಇದೆ. ಯುದ್ಧದಲ್ಲಿ ತಮಾಹಕ್ ಕ್ಷಿಪಣಿ ಬಳಕೆ ಮಾಡುತ್ತಿರುವುದನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ಸಹ ಖಚಿತಪಡಿಸಿದೆ. ಇದು ಅಮೆರಿಕ ವಿರುದ್ಧ ಬಲವಾದ ಸಾಕ್ಷ್ಯವನ್ನು ಒದಗಿಸಿದೆ ಎಂದು ಬೆಲ್ಲಿಂಗ್‌ಕ್ಯಾಟ್ ತಿಳಿಸಿತ್ತು.

