ಟೆಹರಾನ್: 'ನಮ್ಮ ಮೂರು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಪ್ರಸ್ತುತ ಸಂಘರ್ಷವನ್ನು ಅಂತ್ಯಗೊಳಿಸುತ್ತೇವೆ' ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಪ್ರಾದೇಶಿಕ ಶಾಂತಿಯನ್ನು ಕಾಪಾಡಲು ಇರಾನ್ ಬದ್ಧವಾಗಿದೆ' ಎಂದು ಹೇಳಿದ್ದಾರೆ.
'ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ನಮ್ಮ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವುದು, ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರವನ್ನು ಪಾವತಿಸಿವುದು ಮತ್ತು ಭವಿಷ್ಯದಲ್ಲಿ ತಮ್ಮ ದೇಶದ ಮೇಲೆ ಯಾವುದೇ ದಾಳಿಗಳು ನಡೆಸುವುದಿಲ್ಲ ಎಂಬ ಖಾತರಿ ಸಿಕ್ಕಿದರೆ ಮಾತ್ರ ಯುದ್ಧವನ್ನು ಅಂತ್ಯಗೊಳಿಸುತ್ತೇವೆ' ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಇರಾನ್ ಮೇಲೆ ನಡೆಸುತ್ತಿರುವ ಯುದ್ಧವು ಶೀಘ್ರವೇ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ.
'ನಾವು ಅಲ್ಲಿ ಗುರಿಯಿಡಲು ಇನ್ನೇನೂ ಉಳಿದಿಲ್ಲ. ಹೀಗಾಗಿ ಯುದ್ಧವು ಶೀಘ್ರದಲ್ಲಿಯೇ ಮುಕ್ತಾಯವಾಗಲಿದೆ' ಎಂದು 'ಆಯಕ್ಸಿಯಸ್' ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

