ಮುಂಬೈ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಿಂದ ಉಂಟಾಗಿರುವ ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದ ಬಳಿಕ ಇದೇ ಮೊದಲ ಬಾರಿ ಕಚ್ಚಾ ತೈಲ ಹೊಂದಿದ ಹಡಗು, ಹೊರ್ಮುಜ್ ಜಲಸಂಧಿಯಿಂದ ಭಾರತಕ್ಕೆ ತಲುಪಿದೆ.
ತೈಲ ತುಂಬಿದ ಕಂಟೇನರ್‌ಗಳನ್ನು ಹೊಂದಿದ್ದ ಲೈಬೀರಿಯಾ ಮೂಲದ 'ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್' ಎನ್ನುವ ಹಡಗು ಬುಧವಾರ(ಮಾ.11) ಮಧ್ಯಾಹ್ನ 1 ಗಂಟೆಗೆ ಮುಂಬೈ ಬಂದರು ತಲುಪಿದೆ.
ಅದರಲ್ಲಿ 1,35,335 ಟನ್ ಕಚ್ಚಾ ತೈಲವಿದೆ. ಇನ್ನೂ 36 ಗಂಟೆಗಳೊಳಗೆ ಅದನ್ನು ಮಹುಲ್ ಹಾಗೂ ಪೂರ್ವ ಮುಂಬೈನಲ್ಲಿರುವ ರಿಫೈನರಿಗಳಿಗೆ ಸಾಗಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾ.1ರಂದು ಸೌದಿ ಅರೇಬಿಯಾದ ರಾಸ್ ಟನೂರಾ ಬಂದರಿನಿಂದ ಕಂಟೇನರ್‌ಗಳಲ್ಲಿ ಕಚ್ಚಾ ತೈಲವನ್ನು ತುಂಬಿಸಿಕೊಂಡ 'ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್', ಮಾ.3ರಂದು ಅಲ್ಲಿಂದ ಹೊರಟಿತ್ತು. ಟ್ರಾಕಿಂಗ್ ಡಾಟಾದ ಪ್ರಕಾರ ಮಾ.8ರಂದು ಹೊರ್ಮುಜ್ ಜಲಸಂಧಿಯಲ್ಲಿದ್ದ ಹಡಗು, ನಂತರ ಟ್ರಾಕಿಂಗ್ ಆಫ್ ಮಾಡಿಕೊಂಡಿತ್ತು.
'ಶೆನ್ಲಾಂಗ್ ಶಿಪ್ಪಿಂಗ್ ಲಿಮಿಟೆಡ್' ಒಡೆತನದ ಈ ಹಡಗಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ಗೆ ಸೇರಿದ 29 ಸಿಬ್ಬಂದಿಗಳಿದ್ದರು.
ಭಾರತ ಮೂಲದ 28 ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ. ಹೊರ್ಮುಜ್ ಜಲಸಂಧಿಯ ಪಶ್ಚಿಮದಲ್ಲಿ 24 ಹಡಗು ಹಾಗು ಪೂರ್ವದಲ್ಲಿ 4 ಹಡಗುಗಳಿವೆ. ಅದರಲ್ಲಿರುವ ಭಾರತೀಯರ ರಕ್ಷಣೆಯು ನಮ್ಮ ಹೊಣೆಯಾಗಿದೆ ಎಂದು ಭಾರತ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ತಿಳಿಸಿದೆ.
ಮಾ.11ರಂದು ಭಾರತಕ್ಕೆ ಸರಕು ಹೊತ್ತು ತರುತ್ತಿದ್ದ 'ಮಯೂರಿ ನಾರಿ' ಹೆಸರಿನ ಹಡಗು ಹೊರ್ಮುಜ್ ಜಲಸಂಧಿ ಬಳಿ ಇರಾನ್‌ನ ಕ್ಷಿಪಣಿ ದಾಳಿಗೆ ತುತ್ತಾಗಿತ್ತು. ಘಟನೆಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದರು.

