ಇಟಾನಗರ: ಸುಮಾರು 189 ವರ್ಷಗಳ ನಂತರ ಅಪರೂಪದ ಸಸ್ಯ ಪ್ರಭೇದವೊಂದು ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ.
ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಭಾರತೀಯ ಸಸ್ಯವಿಜ್ಞಾನ ಸಮೀಕ್ಷೆಯ(ಬಿಎಸ್‌ಐ) ವಿಜ್ಞಾನಿಗಳು ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ 'ಹೆನ್ಕೆಲಿಯಾ ಮೊನೊಫಿಲ್ಲಾ' (Henckelia monophylla) ಸಸ್ಯವನ್ನು ಪತ್ತೆ ಮಾಡಲಾಗಿದೆ.
19ನೇ ಶತಮಾನದ ನಂತರ ನಶಿಸಿ ಹೋಗಿದ್ದ ಈ ಸಸ್ಯವನ್ನು ಪತ್ತೆ ಮಾಡಿರುವುದು ಪೂರ್ವ ಹಿಮಾಲಯದ ಸಸ್ಯ ವಿಜ್ಞಾನ ಅಧ್ಯಯನಕ್ಕೆ ಮಹತ್ವದ ಸೇರ್ಪಡೆಯಾಗಿದೆ.
ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯದ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಅರುಣಾಚಲ ಪ್ರದೇಶದಲ್ಲಿ ನಿರಂತರ ಕ್ಷೇತ್ರ ಸಮೀಕ್ಷೆಗಳು ಮತ್ತು ಸಂರಕ್ಷಣಾ ಪ್ರಯತ್ನಗಳ ಅಗತ್ಯವನ್ನು ಇಂತಹ ಸಂಶೋಧನೆ ಒತ್ತಿಹೇಳುತ್ತವೆ ಎಂದು ಸಸ್ಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಪರೂಪದ ಸಸ್ಯ ಪ್ರಭೇದವನ್ನು ಮರುಶೋಧಿಸಿದ ವಿಜ್ಞಾನಿಗಳಿಗೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಅವರು ಅಭಿನಂದನೆ ತಿಳಿಸಿದ್ದಾರೆ.
'ಅರುಣಾಚಲ ಪ್ರದೇಶಕ್ಕೆ ಸೀಮಿತವಾದ ಅಪರೂಪದ ಸಸ್ಯ ಪ್ರಭೇದ 'ಹೆನ್ಕೆಲಿಯಾ ಮೊನೊಫಿಲ್ಲಾ' ಸುಮಾರು 189 ವರ್ಷಗಳ ನಂತರ ಮರುಶೋಧನೆಯಾಗಿರುವುದು ಸಂತಸ ತಂದಿದೆ. ಈ ಮಹತ್ವದ ಸಾಧನೆಗಾಗಿ ಭಾರತೀಯ ಸಸ್ಯಶಾಸ್ತ್ರೀಯ ಸಮೀಕ್ಷೆಯ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು' ಎಂದಿದ್ದಾರೆ.
'ಈ ಸಂಶೋಧನೆಯು ರಾಜ್ಯದ ಅಸಾಧಾರಣ ಜೀವವೈವಿಧ್ಯವನ್ನು ಎತ್ತಿ ತೋರಿಸುತ್ತದೆ. ಇಂತಹ ಆವಿಷ್ಕಾರಗಳು ಜಾಗತಿಕ ಸಸ್ಯಶಾಸ್ತ್ರೀಯ ಜ್ಞಾನಕ್ಕೆ ಕೊಡುಗೆ ನೀಡುವುದಲ್ಲದೆ, ನಮ್ಮ ರಾಜ್ಯವು ಹೊಂದಿರುವ ಪರಿಸರ ಸಂಪತ್ತನ್ನು ನಮಗೆ ನೆನಪಿಸುತ್ತವೆ' ಎಂದು ತಿಳಿಸಿದ್ದಾರೆ.
ಹೆನ್ಕೆಲಿಯಾ ಮೊನೊಫಿಲ್ಲಾ:
ಜೆಸ್ನೇರಿಯೇಸಿ ಕುಟುಂಬಕ್ಕೆ ಸೇರಿದ ಈ ಸಸ್ಯವು ಸಾಮಾನ್ಯವಾಗಿ ಅರುಣಾಚಲ ಪ್ರದೇಶದಂತಹ ಆರ್ದ್ರ ಪರಿಸರದಲ್ಲಿ ಕಂಡುಬರುತ್ತದೆ. ಹೆನ್ಕೆಲಿಯಾ ಕುಲದ ಸಸ್ಯಗಳು ಸಾಮಾನ್ಯವಾಗಿ ನೇರವಾದ ಕಾಂಡಗಳನ್ನು ಹೊಂದಿದ್ದು, ದುಂಡನೆಯ ಎಲೆಗಳನ್ನು ಹೊಂದಿರುತ್ತವೆ. ಈ ಸಸ್ಯದ ಹೂಗಳು ಕೊಳವೆಯಾಕಾರದಲ್ಲಿ ಇರುತ್ತದೆ. ಇವುಗಳ ಹಣ್ಣುಗಳು ಉದ್ದವಾದ ಕ್ಯಾಪ್ಸುಲ್‌ಗಳಂತೆ ಇದ್ದು, ಬೀಜದಿಂದ ತುಂಬಿರುತ್ತವೆ.

