ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂರ್ಘಷದಿಂದಾಗಿ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದು, ಈ ನಡುವೆ ಸಮಸ್ಯೆಯನ್ನು ಪರಿಹರಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ತಿಳಿಸಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ, ಇರಾನ್ ಮತ್ತು ಭಾರತ ಮಿತ್ರ ರಾಷ್ಟ್ರಗಳು ಎಂದು ನಂಬುತ್ತೇವೆ. ಉಭಯ ರಾಷ್ಟ್ರಗಳಿಗೆ 'ಸಾಮಾನ್ಯ ಹಿತಾಸಕ್ತಿ ಹಾಗೂ, ಸಾಮಾನ್ಯ ನಂಬಿಕೆ ಇದೆ' ಎಂದು ಹೇಳಿದ್ದಾರೆ.
ಯುದ್ಧದ ಪರಿಸ್ಥಿತಿ ಮುಂದುವರಿದಿದ್ದು ಇರಾನ್ ಯುದ್ಧವನ್ನು ಬಯಸುವುದಿಲ್ಲ, ಆದರೆ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಫತಾಲಿ ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಲ್ಲಿ ಇರಾನ್ ಯಾವುದೇ ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಟ್ಯಾಂಕರ್ ಅನ್ನು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿಲ್ಲ ಎಂದು ತಿಳಿದುಬಂದಿದೆ.
677 ನಾವಿಕರು, ಭಾರತೀಯ ಧ್ವಜ ಹೊಂದಿರುವ ಒಟ್ಟು 24 ಹಡಗುಗಳು ಪ್ರಸ್ತುತ ಹೊರ್ಮುಜ್ ಜಲಸಂಧಿಯ ಪಶ್ಚಿಮ ದಿಕ್ಕಿನಲ್ಲಿ ನಿಂತಿವೆ. ಆದರೆ, 101 ನಾವಿಕರನ್ನು ಹೊಂದಿರುವ ನಾಲ್ಕು ಹಡಗುಗಳು ಕಾರ್ಯತಂತ್ರದ ಜಲಮಾರ್ಗದ ಪೂರ್ವಕ್ಕೆ ನಿಂತಿವೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ನಂತರ ಜಾಗತಿಕ ತೈಲ ಮತ್ತು ಅನಿಲ ಸರಬರಾಜಿಗೆ ತೊಡಕಾಗಿದ್ದು, ಬೆಲೆ ಏರುಗತಿಯಲ್ಲಿದೆ. ಈ ಮಾರ್ಗದ ಮೂಲಕ ಶೇ 20ರಷ್ಟು ತೈಲ ಸರಬರಾಜಾಗುತ್ತದೆ.

