ಲುಧಿಯಾನ: ರಷ್ಯಾ ಸೇನೆ ಸೇರಿದ್ದ ಲುಧಿಯಾನದ 21ವರ್ಷದ ಯುವಕ ಸಮರ್‌ಜೀತ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿದ್ದಾರೆ.
'ಏಜೆನ್ಸಿಯೊಂದು ಉದ್ಯೋಗದ ಆಮಿಷದೊಂದಿಗೆ 2025ರ ಜುಲೈನಲ್ಲಿ ಸಮರ್‌ಜೀತ್ ಅವರನ್ನು ರಷ್ಯಾಕ್ಕೆ ಕರೆಸಿಕೊಂಡಿತ್ತು.
ಯಾವುದೇ ಪೂರ್ವ ತರಬೇತಿ ಇಲ್ಲದೇ ಮೋಸದಿಂದ ರಷ್ಯಾ ಸೇನೆಗೆ ಸೇರಿಸಿ, ಬಲವಂತವಾಗಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ' ಎಂದು ಕುಟುಂಬದವರು ಆರೋಪಿಸಿದ್ದಾರೆ.
'ರಷ್ಯಾದಲ್ಲಿ ಉದ್ಯೋಗ ಒದಗಿಸುವ ಸುಳ್ಳು ಆಮಿಷವೊಡ್ಡಿ ಯುವಕರನ್ನು ಆಕರ್ಷಿಸಿ, ನಂತರ ಅವರನ್ನು ರಷ್ಯಾದ ಸೇನೆಗೆ ಸೇರಿಸಿಕೊಳ್ಳುವ ಏಜೆಂಟ್‌ಗಳೇ ಈ ಘಟನೆಗೆ ಕಾರಣ' ಎಂದು ಸಮರ್‌ಜೀತ್ ಅವರ ತಂದೆ ಚರಣ್‌ಜೀತ್ ಸಿಂಗ್ ದೂಷಿಸಿದ್ದಾರೆ.
'ನನ್ನ ಮಗ ಸಮರ್‌ಜೀತ್ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ನನ್ನೊಂದಿಗೆ ಮಾತನಾಡಿದ್ದು, ನಂತರ ಅವನು ನಾಪತ್ತೆಯಾದ. ಮಗನನ್ನು ಕರೆತರಲು ಸಹಾಯ ಮಾಡುವಂತೆ ಶಾಸಕರು ಸೇರಿದಂತೆ ಹಲವು ನಾಯಕರಲ್ಲಿ ಬೇಡಿಕೊಂಡಿದ್ದೆವು' ಎಂದು ಅವರು ವಿವರಿಸಿದರು.
ಸಮರ್‌ಜೀತ್ ಮತ್ತು ಇತರೆ ಭಾರತೀಯರಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಪೋಸ್ಟ್ ಆಗಿತ್ತು. ಆ ವಿಡಿಯೊದಲ್ಲಿದ್ದವರು 'ನಮಗೆ ಸರಿಯಾದ ತರಬೇತಿಯಿಲ್ಲದೆ ರಷ್ಯಾ-ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ. ನಮ್ಮನ್ನು ರಕ್ಷಿಸಿ' ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು.
ಸಮರ್‌ಜೀತ್ ಸಿಂಗ್ ಮೃತದೇಹವನ್ನು ರಷ್ಯಾದಿಂದ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ತಂದು, ಅಲ್ಲಿಂದ ಲುಧಿಯಾನಕ್ಕೆ ತರಲಾಯಿತು. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

