ದುಬೈ: ಕೊಲ್ಲಿ ಸಂಘರ್ಷದ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದಾರಿ ತಪ್ಪಿಸುವ ಹಾಗೂ ಕೃತ್ರಿಮ ವಿಡಿಯೊಗಳನ್ನು ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿದಂತೆ 35 ಮಂದಿಯನ್ನು ಬಂಧಿಸಲು ಯುಎಇ ಭಾನುವಾರ ಆದೇಶಿಸಿದೆ.
ಇವರನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ನಿರ್ದೇಶಿಸಲಾಗಿದೆ ಎಂದು ಯುಎಇಯ ಅಧಿಕೃತ ಸುದ್ದಿ ಸಂಸ್ಥೆ 'ವಾಮ್' ವರದಿ ಮಾಡಿದೆ.
ಇತ್ತೀಚಿನ ಪಟ್ಟಿಯಲ್ಲಿ ವಿವಿಧ ದೇಶದ 25 ವ್ಯಕ್ತಿಗಳ ಹೆಸರಿದ್ದು, ಇದರಲ್ಲಿ 17 ಭಾರತೀಯರು ಸೇರಿದ್ದಾರೆ. ಶನಿವಾರ ಇಬ್ಬರು ಭಾರತೀಯರ ಬಂಧನಕ್ಕೆ ಆದೇಶಿಸಲಾಗಿತ್ತು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವಿಷಯಗಳ ಪ್ರಸಾರವನ್ನು ತಡೆಗಟ್ಟಲು ಡಿಜಿಟಲ್ ವೇದಿಕೆಗಳ ಮೇಲೆ ನಡೆಸಿದ ಕಟ್ಟುನಿಟ್ಟಿನ ನಿಗಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಟಾರ್ನಿ ಜನರಲ್ ಡಾ. ಹಮದ್ ಸೈಫ್ ಅಲ್ ಶಮ್ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇರಾನ್ ಹಾರಿಸಿದ ಕ್ಷಿಪಣಿ, ಡ್ರೋನ್‌ಗಳನ್ನು ಪ್ರತಿಬಂಧಿಸುತ್ತಿದ್ದೇವೆ: ದುಬೈ
ಈಗಾಗಲೇ ಪ್ರಾಸಿಕ್ಯೂಷನ್ 10 ಆರೋಪಿಗಳ ವಿಚಾರಣೆಯನ್ನು ಪ್ರಾರಂಭಿಸಿದೆ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಶನಿವಾರದ 'ವಾಮ್' ವರದಿ ಮಾಡಿತ್ತು.
ಇಂತಹ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳಾಗಿದ್ದು, ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ಮತ್ತು ಕನಿಷ್ಠ 1,00,000 ದಿರ್ಹಮ್ ದಂಡ ವಿಧಿಸಲು ಅವಕಾಶವಿದೆ ಎಂದು ಅಟಾರ್ನಿ ಜನರಲ್ ವಿವರಿಸಿದ್ದಾರೆ.

