ದುಬೈ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತರಾದ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಬಳಸುತ್ತಿದ್ದ ವಿಮಾನವನ್ನು ಟೆಹರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿಯು ಸೋಮವಾರ ಹೇಳಿದೆ.
ಖಮೇನಿ ಮಾತ್ರವಲ್ಲದೇ, ಇರಾನಿನ ಹಿರಿಯ ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು ಪ್ರಾದೇಶಿಕವಾಗಿ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕೆ ಈ ವಿಮಾನವನ್ನು ಬಳಸುತ್ತಿದ್ದರು ಎಂದೂ ಇಸ್ರೇಲ್ ಹೇಳಿದೆ.
ಇತ್ತ, ಇರಾನ್ ಕೂಡ ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿ ತನ್ನ ದಾಳಿ ಹೆಚ್ಚಿಸಿದೆ. ತೈಲ ಸಾಗಣೆಯ ಮೇಲೆ ಹಿಡಿತಸಾಧಿಸುವತ್ತ ಹೆಜ್ಜೆ ಇಟ್ಟಿದ್ದು, ಈ ಮೂಲಕ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದಂತಾಗಿದೆ.
ಈ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದು, ಸೋಮವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 105 ಡಾಲರ್ ತಲುಪಿದೆ.
ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಲು ಅಮೆರಿಕವು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಬಂದರುಗಳು ಮತ್ತು ಅಡಗುತಾಣಗಳನ್ನು ಬಳಸಿಕೊಳ್ಳುತ್ತಿದೆ ಎಂದೂ ಇರಾನ್ ಆರೋಪಿಸಿದೆ.
ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ: 'ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸಿದೆ' ಎಂದು ಇಸ್ರೇಲ್ ಸೇನೆ ತಿಳಿಸಿದೆ. ಮಧ್ಯ ಇಸ್ರೇಲ್ ಮತ್ತು ಟೆಲ್ ಅವೀವ್ ಪ್ರದೇಶದ ಮೇಲೆ ಅನೇಕ ದಾಳಿಗಳು ನಡೆದಿವೆ. ಇದರಿಂದ ಸುಮಾರು 23 ಸ್ಥಳಗಳಲ್ಲಿ ಹಾನಿ ಉಂಟಾಗಿದ್ದು, ಒಂದು ಕಡೆ ಸಣ್ಣ ಮಟ್ಟದ ಅಗ್ನಿ ಅವಘಡವೂ ಸಂಭವಿಸಿದೆ.
ಇಸ್ರೇಲ್‌ನ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್ ಕ್ಲಸ್ಟರ್ ಬಾಂಬ್‌ಗಳ ಮೂಲಕ ದಾಳಿ ನಡೆಸುತ್ತಿದೆ. ಹಲವು ಬಾಂಬ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ವಿಫಲಗೊಳಿಸಲಾಗಿದೆ ಎಂದೂ ಇಸ್ರೇಲ್ ಮಾಹಿತಿ ನೀಡಿದೆ.
ದುಬೈ ತೈಲ ಟ್ಯಾಂರ್ ಮೇಲೆ ಇರಾನ್ ಡ್ರೋನ್ ದಾಳಿ: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತೈಲ ಟ್ಯಾಂಕರ್ ಒಂದಕ್ಕೆ ಇರಾನ್‌ನ ಡ್ರೋನ್ ಡಿಕ್ಕಿಯಾದ ಪರಿಣಾಮ ತೀವ್ರ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ವಿಮಾನ ನಿಲ್ದಾಣವು ಕೆಲವು ಗಂಟೆ ಎಲ್ಲಾ ವಿಮಾನ ಪ್ರಯಾಣವನ್ನು ರದ್ದುಗೊಳಿಸಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಯುಎಇ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಿಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು. ಹಲವು ತೈಲ ಘಟಕಗಳಿರುವ ಪೂರ್ವ ಪ್ರಾಂತ್ಯವನ್ನೂ ಗುರಿಯಾಗಿಸಿ ಇರಾನ್ 35 ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದು, ಅವುಗಳನ್ನು ವಿಫಲಗೊಳಿಸಲಾಗಿದೆ ಎಂದೂ ಹೇಳಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ- ಮೂವರ ಸಾವು: ಲೆಬನಾನ್ ರಾಜಧಾನಿ ಬೈರೂತ್ ಹಾಗೂ ದಕ್ಷಿಣ ಲೆಬನಾನ್ ಮೇಲೆ ಮೇಲೆ ಇಸ್ರೇಲ್ ಸೋಮವಾರ ದಾಳಿ ನಡೆಸಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರ ಗುಂಪಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಿರುವುದಾಗಿ ತಿಳಿಸಿದೆ.
ದಕ್ಷಿಣ ಲೆಬನಾನ್‌ನ ಗ್ರಾಮವೊಂದರ ಮೇಲೆ ನಡೆಸಿರುವ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಸ್ಲಾಮಿಕ್ ಹೆಲ್ತ್ ಸೊಸೈಟಿಯ ಮೇಲೂ ದಾಳಿ ನಡೆದ ಪರಿಣಾಮ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ದಾಳಿಯಿಂದಾಗಿ ಲೆಬನಾನ್‌ನಲ್ಲಿ ಮಾನವೀಯ ಬಿಕ್ಕಟ್ಟು ಹೆಚ್ಚಾಗಿದೆ. 850ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 8.50 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಲೆಬನಾನ್‌ಗೆ ಹೆಚ್ಚುವರಿ ಭೂಸೇನೆ: 'ಲೆಬನಾನ್‌ಗೆ ಹೆಚ್ಚುವರಿ ಭೂಸೇನೆಯನ್ನು ಕಳುಹಿಸಲಾಗಿದೆ. ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ದಾಳಿಯಿಂದ ಇಸ್ರೇಲ್‌ನ ಗಡಿ ಪ್ರದೇಶದ ಜನರನ್ನು ರಕ್ಷಿಸುವುದು ಈ ನಿಯೋಜನೆಯ ಉದ್ದೇಶವಾಗಿದೆ' ಎಂದು ಇಸ್ರೇಲ್‌ನ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾದವ್ ಶೋಶಾನಿ ತಿಳಿಸಿದ್ದಾರೆ.
ಟ್ರಂಪ್‌ಗೆ ತಪ್ಪು ಅರಿವಾಗುವವರೆಗೆ ಯುದ್ಧ ನಿಲ್ಲದು: ಇರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಮ್ಮ ತಪ್ಪಿನ ಅರಿವಾಗುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ವಿ ಹೇಳಿದ್ದಾರೆ. ಯುದ್ಧ ನಿಲ್ಲಿಸಲು ಒಪ್ಪಂದ ಮಾಡಿಕೊಳ್ಳುವಂತೆ ಇರಾನ್ ಬೇಡಿಕೊಳ್ಳುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ದೇಶ ಮಾತುಕತೆಯನ್ನಾಗಲಿ ಒಪ್ಪಂದವನ್ನಾಗಲಿ ಬಯಸುತ್ತಿಲ್ಲ ಎಂದಿದ್ದಾರೆ. ಜತೆಗೆ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ' ಇರಾನಿಯನ್ನರು ಮಾತ್ರವಲ್ಲದೇ ಅಮೆರಿಕನ್ನರ ಮೇಲೂ ತಾನು ಅಕ್ರಮ ಯುದ್ಧ ಘೋಷಿಸಿದ್ದೇನೆ ಎಂಬುದು ಟ್ರಂಪ್ ಅರಿತುಕೊಳ್ಳಬೇಕು. ಅಲ್ಲದೇ ಇದು ತಪ್ಪು ಇನ್ನೆಂದೂ ಮರುಕಳಿಸದು ಎಂಬುದನ್ನು ಅವರು ಅರ್ಥೈಸಿಕೊಳ್ಳುವವರೆಗೂ ನಮ್ಮ ಬಲಿಷ್ಠ ರಕ್ಷಣಾ ಪಡೆಗಳು ಹೋರಾಡಲಿವೆ' ಎಂದಿದ್ದಾರೆ.
ಮಿತ್ರ ರಾಷ್ಟ್ರಗಳಿಗೆ ಟ್ರಂಪ್ ಬೆದರಿಕೆ ಹೂರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿರಿಸಲು ಮಿತ್ರ ರಾಷ್ಟ್ರಗಳ ಬೆಂಬಲ ಕೋರಿದ್ದ ಟ್ರಂಪ್ ಇದೀಗ ಮಿತ್ರ ರಾಷ್ಟ್ರಗಳಿಗೇ ಪರೋಕ್ಷ ಬೆದರಿಕೆ ಒಡ್ಡಿದ್ದಾರೆ. 'ನಮಗೆ ಬೆಂಬಲ ಸಿಗುತ್ತದೆಯೋ ಇಲ್ಲವೋ ಆದರೆ ಈ ವಿಚಾರವನ್ನು ಮಾತ್ರ ನಾವು ನೆನಪಿನಲ್ಲಿಟ್ಟುಕೊಂಡಿರುತ್ತೇವೆ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮೂಲಕ ಅಮೆರಿಕಕ್ಕೆ ಬೆಂಬಲ ನೀಡದ ರಾಷ್ಟ್ರಗಳಿಗೆ ಪರೋಕ್ಷ ಬೆದರಿಕೆ ಒಡ್ಡಿದ್ದಾರೆ.

