ವಾಶಿಂಗ್ಟನ್: ಅಸೋಸಿಯೇಟೆಡ್ ಪ್ರೆಸ್- ಎನ್‍ಒಆರ್‍ಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕ್ರಮಗಳು ʼಅತಿಯಾಗಿವೆ' ಎಂದು ಬಹುತೇಕ ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಹೊರಗೆ ಮಿಲಿಟರಿ ಬಲದ ಬಳಕೆಯ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಅವರ ಸಾಮರ್ಥ್ಯದ ಬಗ್ಗೆ ಅಮೆರಿಕನ್ನರು ವ್ಯಾಪಕವಾಗಿ ಭಯಪಡುತ್ತಾರೆ ಮತ್ತು ನೆಲದ ಪಡೆಗಳನ್ನು(ಗ್ರೌಂಡ್ ಫೋರ್ಸ್) ನಿಯೋಜಿಸುವಂತಹ ಆಕ್ರಮಣಕಾರಿ ಕ್ರಮಗಳನ್ನು ಅವರು ಹೆಚ್ಚಾಗಿ ವಿರೋಧಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವು ನಾಲ್ಕನೇ ವಾರಕ್ಕೆ ಮುಂದುವರಿದಿರುವ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನುಮೋದನೆಯ ರೇಟಿಂಗ್ ಸ್ಥಿರವಾಗಿದ್ದರೂ, ಸಂಘರ್ಷವು ಅವರ ರಿಪಬ್ಲಿಕನ್ ಆಡಳಿತಕ್ಕೆ ಪ್ರಮುಖ ರಾಜಕೀಯ ಹೊಣೆಗಾರಿಕೆಯಾಗಿ ಬದಲಾಗಬಹುದು ಎಂದು ಸೂಚಿಸಿದೆ. ಟ್ರಂಪ್ ಮಧ್ಯಪ್ರಾಚ್ಯಕ್ಕೆ ಮತ್ತಷ್ಟು ಸಮರ ನೌಕೆಗಳು ಮತ್ತು ತುಕಡಿಗಳನ್ನು ನಿಯೋಜಿಸುತ್ತಿರುವಂತೆಯೇ, ಇರಾನ್‍ನಲ್ಲಿ ಅಮೆರಿಕದ ಮಿಲಿಟರಿ ಕ್ರಮಗಳು ʼಅತಿಯಾಗಿವೆ' ಎಂದು 59% ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. 45% ಜನರು ಮುಂದಿನ ಕೆಲವು ತಿಂಗಳುಗಳಲ್ಲಿ ಗ್ಯಾಸ್ ಪಡೆಯಲು ಸಾಧ್ಯವಾಗುವ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ.
ಆದರೆ ಟ್ರಂಪ್ ಅವರ ಒಂದು ಉದ್ದೇಶಕ್ಕೆ (ಇರಾನ್ ಪರಮಾಣು ಅಸ್ತ್ರವನ್ನು ಹೊಂದದಂತೆ ತಡೆಯುವುದು) ಹೆಚ್ಚಿನ ಅಮೆರಿಕನ್ನರ ಬೆಂಬಲವಿದೆ. ಇದು ಅತ್ಯಂತ ಪ್ರಮುಖ ವಿದೇಶಾಂಗ ನೀತಿಯ ಗುರಿಯಾಗಿರಬೇಕು. ಇದೇ ವೇಳೆ, ಅನಿಲ ಮತ್ತು ತೈಲ ಬೆಲೆಗಳು ಏರದಂತೆ ಗಮನ ವಹಿಸುವುದೂ ಅತ್ಯಗತ್ಯ ಎಂದು ಮೂರನೇ ಎರಡರಷ್ಟು ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾದ 40% ವಯಸ್ಕರು ಅಧ್ಯಕ್ಷರಾಗಿ ಟ್ರಂಪ್ ಅವರ ಕಾರ್ಯಕ್ಷಮತೆಯನ್ನು ಅನುಮೋದಿಸಿದ್ದಾರೆ.
ಇರಾನ್ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆಯೇ ಎಂಬ ಕುರಿತು ಟ್ರಂಪ್ ಮಿಶ್ರ ಸಂದೇಶಗಳನ್ನು ನೀಡುತ್ತಿರುವಂತೆಯೇ, ಡೆಮಾಕ್ರಟಿಕ್ ಪಕ್ಷದ 10 ಸದಸ್ಯರಲ್ಲಿ 9 ಮತ್ತು ಸ್ವತಂತ್ರ 10 ಸದಸ್ಯರಲ್ಲಿ 6 ಮಂದಿ ಇರಾನ್ ದಾಳಿಗಳು ʼಮಿತಿ ಮೀರಿವೆ' ಎಂದು ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆಯ ವರದಿ ತಿಳಿಸಿದೆ.

