ನವದೆಹಲಿ: ಜಿ7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲು ಸಚಿವ ಎಸ್. ಜೈಶಂಕರ್ ಅವರು, ಫ್ರಾನ್ಸ್‌ಗೆ ಗುರುವಾರ ತೆರಳಿದರು.
ಅಮೆರಿಕ, ಕೆನಡಾ, ಜರ್ಮನಿ, ಇಟಲಿ, ಫ್ರಾನ್ಸ್, ಜಪಾನ್ ಹಾಗೂ ಬ್ರಿಟನ್ ಜಿ7 ಸದಸ್ಯ ರಾಷ್ಟ್ರಗಳು. ಭಾರತ ಈ ಶೃಂಗದ ಸದಸ್ಯ ಅಲ್ಲ.
ಆದರೆ, ಶೃಂಗದ ಅಧ್ಯಕ್ಷ ಫ್ರಾನ್ಸ್, ಪಾಲುದಾರ ರಾಷ್ಟ್ರವನ್ನಾಗಿ ಭಾರತವನ್ನು ಆಹ್ವಾನಿಸಿದೆ. ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಹಾಗೂ ಬ್ರೆಜಿಲ್‌ಗಳಿಗೂ ಆಹ್ವಾನ ನೀಡಲಾಗಿದೆ.
ಮಾರ್ಚ್ 26- 27ರಂದು ಫ್ರಾನ್ಸ್‌ನ ಅಬ್ಬಾಯೆ ಡೆಸ್-ವೋಕ್ಸ್-ಡಿ-ಸೆರ್ನೆಯಲ್ಲಿ ಜಿ7 ರಾಷ್ಟ್ರಗಳ ಉನ್ನತ ರಾಜತಾಂತ್ರಿಕರ ಸಭೆ ನಡೆಯಲಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಹೊರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಜಿ7 ಸಭೆ ಹೊರತಾಗಿ ಜೈಶಂಕರ್ ಅವರು ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಸುವ ನಿರೀಕ್ಷೆ ಇದೆ.

