HEALTH TIPS

ದೇಶದಲ್ಲಿ 60 ದಿನಗಳಿಗೆ ಬೇಕಾಗುವಷ್ಟು ಇಂಧನ ದಾಸ್ತಾನಿದೆ : ಕೇಂದ್ರ ಸರಕಾರ ಮಾಹಿತಿ

ನವದೆಹಲಿ: ದೇಶದಲ್ಲಿ ಸುಮಾರು 60 ದಿನಗಳ ಇಂಧನ ದಾಸ್ತಾನು ಇದೆ ಎಂದು ಗುರುವಾರ ಪ್ರತಿಪಾದಿಸಿರುವ ಕೇಂದ್ರ ಸರಕಾರವು, ಇಂಧನ ಕೊರತೆಯ ವರದಿಗಳನ್ನು 'ಉದ್ದೇಶಪೂರ್ವಕ ತಪ್ಪು ಮಾಹಿತಿ ಅಭಿಯಾನ' ಎಂದು ತಳ್ಳಿಹಾಕಿದೆ.

ಪೆಟ್ರೋಲ್, ಡೀಸೆಲ್ ಅಥವಾ ನೈಸರ್ಗಿಕ ಅನಿಲದ ಕೊರತೆಯಿಲ್ಲ, ದೇಶಾದ್ಯಂತ ಎಲ್ಲ ಪೆಟ್ರೋಲ್ ಬಂಕ್‌ಗಳು ಸಾಕಷ್ಟು ದಾಸ್ತಾನು ಹೊಂದಿವೆ ಮತ್ತು ಖರೀದಿಗೆ ಯಾವುದೇ ಮಿತಿ ಹೇರದೇ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತಿಳಿಸಿದೆ.

ದೇಶದ ಪ್ರತಿಯೊಂದೂ ಸಂಸ್ಕರಣಾಗಾರವು ಶೇ.100ಕ್ಕೂ ಅಧಿಕ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ತೈಲ ಕಂಪೆನಿಗಳು ಮುಂದಿನ 60 ದಿನಗಳ ಕಚ್ಚಾತೈಲ ಪೂರೈಕೆಯನ್ನು ಈಗಾಗಲೇ ಖಚಿತಪಡಿಸಿಕೊಂಡಿವೆ. ಯಾವುದೇ ಪೂರೈಕೆ ಕೊರತೆಯಿಲ್ಲ ಎಂದು ಸಚಿವಾಲಯವು ಹೇಳಿದೆ.

ಸಚಿವಾಲಯದ ಪ್ರಕಾರ ಮಧ್ಯಪ್ರಾಚ್ಯ ಬಿಕ್ಕಟ್ಟು 27ನೇ ದಿನಕ್ಕೆ ಕಾಲಿರಿಸಿದ್ದರೂ ಭಾರತವು ಪ್ರಸ್ತುತ ಕಚ್ಚಾತೈಲ, ಸಂಸ್ಕರಿತ ಉತ್ಪನ್ನಗಳು ಮತ್ತು ವ್ಯೆಹಾತ್ಮಕ ಮೀಸಲು ಸೇರಿದಂತೆ ಇನ್ನೂ ಸುಮಾರು 60 ದಿನಗಳ ಇಂಧನ ದಾಸ್ತಾನು ಹೊಂದಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯವು 74 ದಿನಗಳಷ್ಟಿದೆ. ಜಾಗತಿಕವಾಗಿ ಏನೇ ನಡೆದರೂ ಪ್ರತಿಯೊಬ್ಬ ಭಾರತದ ಪ್ರಜೆಗೆ ಸುಮಾರು ಎರಡು ತಿಂಗಳುಗಳ ನಿರಂತರ ಪೂರೈಕೆ ಲಭ್ಯವಿದೆ.

ಹಾರ್ಮುಝ್ ಜಲಸಂಧಿಯ ಸುತ್ತಮುತ್ತ ಉದ್ನಿಗ್ನತೆಯಿದ್ದರೂ ಕಚ್ಚಾತೈಲ ಪೂರೈಕೆ ಸ್ಥಿರವಾಗಿಯೇ ಇದೆ. ಪರ್ಯಾಯ ಮೂಲಗಳಿಂದ ಖರೀದಿಗಳ ಮೂಲಕ ಪೂರೈಕೆಯಲ್ಲಿ ಕೊರತೆಯನ್ನು ಸರಿದೂಗಿಸಲಾಗುತ್ತಿದೆ ಎಂದು ಸರಕಾರವು ಪ್ರತಿಪಾದಿಸಿದೆ. ಎಲ್‌ಪಿಜಿಯೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ತಿಳಿಸಿರುವ ಅದು, ದೇಶೀಯ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಹೆಚ್ಚುವರಿ ಆಮದುಗಳನ್ನು ಉಲ್ಲೇಖಿಸಿದೆ.

ಭಾರತದ ಮೀಸಲು ಸಂಗ್ರಹ ಖಾಲಿಯಾಗಿದೆ ಅಥವಾ ಸಾಕಷ್ಟು ಪ್ರಮಾಣದಲ್ಲಿಲ್ಲ ಎಂಬ ಯಾವುದೇ ಹೇಳಿಕೆಯು ತಿರಸ್ಕಾರಕ್ಕೆ ಅರ್ಹವಾಗಿದೆ ಎಂದು ಹೇಳಿರುವ ಸಚಿವಾಲಯವು,ಆತಂಕವನ್ನು ಸೃಷ್ಟಿಸಲು ಕೊರತೆಯ ಕುರಿತು ತಪ್ಪುದಾರಿಗೆಳೆಯುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹರಡಲಾಗುತ್ತಿದೆ ಮತ್ತು ಇದಕ್ಕೆ ಹೊಣೆಗಾರರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ನಡುವೆ ಸರಕಾರದ ಹೇಳಿಕೆಗಳನ್ನು ಪ್ರಶ್ನಿಸಿರುವ ಪ್ರತಿಪಕ್ಷವು, ಅವು ತಳಮಟ್ಟದ ವಾಸ್ತವಗಳಿಂದ ದೂರವಾಗಿದೆ ಎಂದು ಆರೋಪಿಸಿದೆ.

ಎಲ್‌ಪಿಜಿ ಬಿಕ್ಕಟ್ಟು ಹದಗೆಡುತ್ತಿರುವುದನ್ನು ಸರಕಾರವು ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಟಿಎಂಸಿಯ ರಾಜ್ಯಸಭಾ ಉಪನಾಯಕಿ ಸಾಗರಿಕಾ ಘೋಷ್ ಅವರು,ನರೇಂದ್ರ ಮೋದಿ ಸರಕಾರವು ಸಂಪೂರ್ಣವಾಗಿ ವಾಸ್ತವಿಕತೆಯಿಂದ ದೂರವಾಗಿದೆ. ದೇಶಾದ್ಯಂತ ಸಣ್ಣ ಹೋಟೆಲ್‌ಗಳು, ರೆಸ್ಟೋರಂಟ್‌ಗಳು, ಸಣ್ಣ ಕೈಗಾರಿಕೆಗಳು, ಅನೌಪಚಾರಿಕ ವಲಯ, ಕಾರ್ಮಿಕರು, ಗೃಹಿಣಿಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಎಲ್‌ಪಿಜಿ ಕೊರತೆಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಮೋದಿ ಸರಕಾರವು ಈ ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಈ ತುರ್ತು ಸ್ಥಿತಿಗೆ ನಾಗರಿಕರೇ ಕಾರಣರಾಗಿರುವಂತೆ, ನಾಗರಿಕರು ಆತಂಕಗೊಂಡಿರುವುದು ಅವರದೇ ತಪ್ಪಾಗಿರುವಂತೆ ಸರಕಾರವು 'ಓಹ್,ದಯವಿಟ್ಟು ಭಯಪಡಬೇಡಿ ' ಎಂದು ಹೇಳುತ್ತಿದೆ ಎಂದು ಟೀಕಿಸಿದರು.

ಪೂರೈಕೆಯ ಬಗ್ಗೆ ಕಳವಳಗಳು ಮುಂದುವರಿದರೆ ನಾಗರಿಕರಲ್ಲಿ ಭೀತಿ ಅನಿವಾರ್ಯ. ಸರಕಾರವು ಎಲ್‌ಪಿಜಿಯನ್ನು ಏಕೆ ದಾಸ್ತಾನು ಮಾಡಿಲ್ಲ? ಎಲ್‌ಪಿಜಿ ಬಿಕ್ಕಟ್ಟನ್ನು ಎದುರಿಸಲು ಸೂಕ್ತ ಕ್ರಿಯಾ ಯೋಜನೆಯನ್ನು ಏಕೆ ರೂಪಿಸಿಲ್ಲ ಎಂದು ಘೋಷ್ ಪ್ರಶ್ನಿಸಿದರು.

ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಚರ್ಚಿಸದಿರುವುದನ್ನು ಪ್ರಶ್ನಿಸಿ ಟಿಎಂಸಿ ಸರಕಾರವು ಪ.ಏಶ್ಯಾ ಪರಿಸ್ಥಿತಿಯ ಕುರಿತು ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿರಲಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries