ಮುಂಬೈ: ಬಲವಂತ, ಮೋಸ, ಆಮಿಷ ಅಥವಾ ಮದುವೆಯ ಕಾರಣಕ್ಕಾಗಿ ಮತಾಂತರಗೊಳ್ಳುವುದಕ್ಕೆ ನಿರ್ಬಂಧ ಹೇರುವ 'ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2026'ಕ್ಕೆ ಮಹಾರಾಷ್ಟ್ರ ವಿಧಾನಸಭೆ ಸೋಮವಾರ ರಾತ್ರಿ ಅಂಗೀಕಾರ ನೀಡಿದೆ.
ಮದುವೆಯ ಕಾರಣಕ್ಕೆ ಕಾನೂನು ಬಾಹಿರವಾಗಿ ಮತಾಂತರಕ್ಕೆ ಮುಂದಾದರೆ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸುವ ಪ್ರಸ್ತಾಪ ಕಾಯ್ದೆಯಲ್ಲಿದೆ.
ಅಪ್ರಾಪ್ತ ವಯಸ್ಸಿನ, ಮಾನಸಿಕ ಅಸ್ವಸ್ಥ, ಮಹಿಳೆ ಅಥವಾ ಎಸ್‌ಟಿ ಹಾಗೂ ಎಸ್‌ಸಿಗೆ ಸೇರಿದವರನ್ನು ಮತಾಂತರ ಮಾಡಿದರೆ ₹ 5 ಲಕ್ಷ ದಂಡ ವಿಧಿಸಲಾಗುತ್ತದೆ.
ಸಾಮೂಹಿಕ ಮತಾಂತರಕ್ಕೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 5 ಲಕ್ಷ ದಂಡ. ಅಪರಾಧ ಪುನರಾವರ್ತನೆಯಾದರೆ 10 ವರ್ಷ ಜೈಲು ಹಾಗೂ ₹ 5 ಲಕ್ಷ ದಂಡ ವಿಧಿಸುವ ಪ್ರಸ್ತಾಪ ಇದೆ.
'ಇದು ಯಾವುದೇ ಧರ್ಮದ ವಿರುದ್ಧ ಅಲ್ಲ, ಬಲತ್ಕಾರದ, ಮೋಸದ ಹಾಗೂ ಆಮೀಷದ ಮತಾಂತರ ತಡೆಯಲು ಈ ಕಾನೂನು ತರಲಾಗುತ್ತಿದೆ' ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಸೂದೆ ಮೇಲಿನ ಚರ್ಚೆಯಲ್ಲಿ ಹೇಳಿದ್ದಾರೆ.
ಒಡಿಶಾ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ ಹಾಗೂ ಜಾರ್ಖಂಡ್‌ನಲ್ಲಿ ಈಗಾಗಲೇ ಈ ಕಾನೂನು ಜಾರಿಯಲ್ಲಿದೆ ಎಂದೂ ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.
ಈ ಮಸೂದೆಯು ಸಂವಿಧಾನದ 25ನೇ ವಿಧಿಯಡಿ ದತ್ತವಾಗಿರುವ ಧರ್ಮವನ್ನು ಅನುಕರಿಸುವ ಹಕ್ಕಿಗೆ ಯಾವುದೇ ನಿರ್ಬಂಧ ಹೇರುವುದಿಲ್ಲ. ಧರ್ಮ ಪಾಲಿಸುವ ಹಕ್ಕಿನಲ್ಲಿ ಬಲವಂತದ ಮತಾಂತರ ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ಫಡಣವೀಸ್ ಹೇಳಿದ್ದಾರೆ.

