ನವದೆಹಲಿ: ಬಿಹಾರದಲ್ಲಿ ಗೆಲ್ಲ ಬಹುದಾಗಿದ್ದ ಒಂದು ರಾಜ್ಯಸಭೆ ಸ್ಥಾನವನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕಳೆದುಕೊಂಡಿದ್ದು, ಎಲ್ಲಾ ಐದು ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಗೆದ್ದುಕೊಂಡಿದೆ.
ಕಾಂಗ್ರೆಸ್‌ನ ಮೂವರು ಶಾಸಕರು ಹಾಗೂ ಆರ್‌ಜೆಡಿಯ ಶಾಸಕರೊಬ್ಬರು ಮತದಾನಕ್ಕೆ ಗೈರು ಹಾಜರಾಗಿದ್ದರಿಂದ ಎನ್‌ಡಿಎಗೆ ಗೆಲುವು ಲಭಿಸಿದೆ.
ಈ ಬೆಳವಣಿಗೆಯಿಂದ ಆರ್‌ಜೆಡಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ರಾಮನಾಥ್ ಠಾಕೂರ್, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ಗೆಲುವು ಖಚಿತವಾಗಿತ್ತು. ಐದನೇ ಸ್ಥಾನಕ್ಕಾಗಿ ಬಿಜೆಪಿ ನಾಯಕ ಶಿವೇಶ್ ಕುಮಾರ್ ಮತ್ತು ಆರ್‌ಜೆಡಿ ಅಭ್ಯರ್ಥಿ ಎ.ಡಿ.ಸಿಂಗ್ ನಡುವೆ ಸ್ಪರ್ಧೆ ನಡೆದಿತ್ತು.
ಮೊದಲ ಪ್ರಾಶಸ್ತ್ಯದ 30 ಮತಗಳನ್ನು ಪಡೆದ ಎನ್‌ಡಿಎ ಐದನೇ ಅಭ್ಯರ್ಥಿ ಶಿವೇಶ್ ಕುಮಾರ್ ಅವರು ಎರಡನೇ ಪ್ರಾಶಸ್ತ್ಯದ ಮತಗಳ ನೆರವಿನಿಂದ ಆರ್‌ಜೆಡಿಯ ಎ.ಸಿ.ಸಿಂಗ್ ಅವರನ್ನು ಸೋಲಿಸಿದರು. ಈ ಮೂಲಕ ಎನ್‌ಡಿಎ ಐದು ಸ್ಥಾನಗಳನ್ನು ಗೆದ್ದುಕೊಂಡಿತು. ಎನ್‌ಡಿಎ ಐದನೇ ಅಭ್ಯರ್ಥಿ ಕೂಡ ಗೆಲುವು ದಾಖಲಿಸಲಿದ್ದಾರೆ ಎಂದು ಎನ್‌ಡಿಎ ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿತ್ತು.
'ಮಹಾಘಟಬಂಧನ್'ನ ನಾಲ್ವರು ಶಾಸಕರು (ಕಾಂಗ್ರೆಸ್‌ನ ಮೂವರು, ಆರ್‌ಜೆಡಿಯ ಒಬ್ಬರು) ಮತದಾನದಿಂದ ದೂರ ಉಳಿದದ್ದು, ಎನ್‌ಡಿಎಯ ಐದನೇ ಅಭ್ಯರ್ಥಿಯ ಗೆಲುವನ್ನು ಸುಲಭವಾಗಿಸಿತು. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಮತ್ತು ಬಿಎಸ್‌ಪಿ ಬೆಂಬಲ ನೀಡಿದ್ದರೂ ಮಹಾಘಟಬಂಧನ್ ಅಗತ್ಯವಿರುವ 41 ಶಾಸಕರನ್ನು ಒಟ್ಟುಗೂಡಿಸುವಲ್ಲಿ ವಿಫಲವಾಯಿತು.
ತೇಜಸ್ವಿ ಯಾದವ್, ಆರ್‌ಜೆಡಿ ನಾಯಕಮತದಾನಕ್ಕೆ ಗೈರಾದವರ ಮೇಲೆ ಬಿಜೆಪಿಯ ಪ್ರಭಾವವಿದೆ
ನಾಲ್ವರು ಮತದಾನದಿಂದ ದೂರ...
ಆರ್‌ಜೆಡಿ ಫೈಸಲ್ ರೆಹಮಾನ್, ಕಾಂಗ್ರೆಸ್ ಮನೋಹರ್ ಪ್ರಸಾದ್, ಸುರೇಂದ್ರ ಕುಶ್ವಾಹ ಮತ್ತು ಮನೋಜ್ ವಿಶ್ವಾಸ್ ಅವರು ಮತಚಲಾಯಿಸಲು ಬರಲಿಲ್ಲ. ಇದಕ್ಕೆ ವ್ಯತಿರಿಕ್ತ ಎಂಬಂತೆ ಎನ್‌ಡಿಎ ಎಲ್ಲ 202 ಶಾಸಕರು ಮತ ಚಲಾಯಿಸಿದರು.
ತಾಯಿಯ ಅನಾರೋಗ್ಯದ ಕಾರಣದಿಂದ ಮತಚಲಾಯಿಸಲು ಆಗಲಿಲ್ಲ ಎಂದು ಆರ್‌ಜೆಡಿಯ ಫೈಸಲ್ ರೆಹಮಾನ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಪಕ್ಷದ ಮೂವರು ಶಾಸಕರನ್ನು ಬಿಜೆಪಿಯವರು ಅಪಹರಿಸಿದ್ದಾರೆ. ಈ ಮೂವರೂ ಮಾರ್ಚ್ 13ರಿಂದ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಬಿಹಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಶ್ ರಾಮ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಮೇಲೆ ಆರೋಪ...
ಈ ಬೆಳವಣಿಗೆಯಿಂದ ಬಿಹಾರದಲ್ಲಿ ತೇಜಸ್ವಿ ಯಾದವ್ ಮತ್ತೊಮ್ಮೆ ಕಾಂಗ್ರೆಸ್‌ನಿಂದಲೇ ಸೋಲು ಅನುಭವಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ತೇಜಸ್ವಿ ಯಾದವ್ ಮಹಾಘಟಬಂಧನ ಅಭ್ಯರ್ಥಿ ಗೆಲ್ಲಿಸಲು ಸತತ ಪ್ರಯತ್ನ ಮಾಡಿದರು. ಎಐಎಂಐಎಂ ಹಾಗೂ ಬಿಎಸ್‌ಪಿ ಬೆಂಬಲ ಪಡೆದುಕೊಂಡಿದ್ದರು. ಹಾಗೇ ಐಐಪಿ ಪಕ್ಷದ ಏಕೈಕ ಶಾಸಕ ಐಪಿ ಗುಪ್ತ ಅವರ ಬೆಂಬಲವೂ ಇತ್ತು. ಆದರೆ ಕಾಂಗ್ರೆಸ್ ತನ್ನ ಶಾಸಕರನ್ನು ನಿಯಂತ್ರಣದಲ್ಲಿಡಲು ವಿಫಲವಾದ ಕಾರಣ ಈ ಸೋಲಾಯಿತು ಎಂದು ಆರ್‌ಜೆಡಿ ಮುಖಂಡರು ಆರೋಪಿಸಿದ್ದಾರೆ.
ಮೂವರು ಶಾಸಕರು ಅಂತರಕಾಯ್ದುಕೊಂಡಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಇದು ತಿಳಿದಿದ್ದರೂ ಕಾಂಗ್ರೆಸ್ ಅವರೊಂದಿಗೆ ಸಂಪರ್ಕ ಸಾಧಿಸದಿರುವುದು ಆಶ್ಚರ್ಯತಂದಿದೆ ಎಂದು ಆರ್‌ಜೆಡಿ ಆರೋಪಿಸಿದೆ.
ಮತದಾನಕ್ಕೆ ಗೈರಾದವರ ಮೇಲೆ ಬಿಜೆಪಿಯ ಪ್ರಭಾವವಿದೆ ಹಾಗೂ 'ಕುದುರೆ ವ್ಯಾಪಾರ' ನಡೆಸಿದೆ. ಅವರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದಾರೆ.

