ದುಬೈ/ದೋಹಾ/ಕುವೈತ್ ಸಿಟಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ನಿರಂತರ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಆರಂಭಿಸಿರುವ ಪ್ರತೀಕಾರದ ದಾಳಿಗಳು ಸತತ ಮೂರನೇ ದಿನವೂ ತೀವ್ರಗೊಂಡಿವೆ. ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಕುವೈತ್ ನಗರಗಳಲ್ಲಿ ಭಾರೀ ಸ್ಫೋಟಗಳ ಶಬ್ದಗಳು ಕೇಳಿಬಂದಿದ್ದು, ಸೈರನ್ ಗಳು ಮೊಳಗಿದ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಯುಎಇಯ ದುಬೈ ಹಾಗೂ ಖತರ್ ರಾಜಧಾನಿ ದೋಹಾ ನಗರಗಳಲ್ಲಿ ರವಿವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ. ಅಮೆರಿಕ-ಇಸ್ರೇಲ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಸೋಮವಾರ ಮುಂಜಾನೆ ಕುವೈತ್ ನಗರದಲ್ಲಿಯೂ ಜೋರಾಗಿ ಸ್ಪೋಟ ಶಬ್ದಗಳು ಕೇಳಿಬಂದಿದ್ದು, ಅಮೆರಿಕ ರಾಯಭಾರ ಕಚೇರಿ ಸಮೀಪ ಹೊಗೆ ಕಂಡುಬಂದಿದೆ ಎಂದು reuters.com ಸುದ್ದಿ ಸಂಸ್ಥೆ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ. ಕುವೈತ್ ವಾಯು ರಕ್ಷಣಾ ಪಡೆಗಳು ರುಮೈಥಿಯಾ ಮತ್ತು ಸಲ್ವಾ ಪ್ರದೇಶಗಳ ಬಳಿ ಅನೇಕ ಡ್ರೋನ್‌ಗಳನ್ನು ತಡೆಹಿಡಿದಿವೆ ಎಂದು ನಾಗರಿಕ ರಕ್ಷಣಾ ಮಹಾನಿರ್ದೇಶಕರನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಕುವೈತ್ ಸುದ್ದಿ ಸಂಸ್ಥೆ ತಿಳಿಸಿದೆ.
ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಗಳು ಮೂರನೇ ದಿನವೂ ಮುಂದುವರಿದಿರುವ ಹಿನ್ನೆಲೆಯಲ್ಲಿ, ಈ ಪ್ರದೇಶದಲ್ಲಿನ ಅಮೆರಿಕದ ಮಿಲಿಟರಿ ಗುರಿಗಳನ್ನು ಹೊಡೆಯುವುದಾಗಿ ಟೆಹ್ರಾನ್ ಎಚ್ಚರಿಸಿದೆ. ಗಲ್ಫ್ ನಗರಗಳ ನಾಗರಿಕ ಹಾಗೂ ವಾಣಿಜ್ಯ ಪ್ರದೇಶಗಳ ಮೇಲೂ ದಾಳಿಗಳು ನಡೆದಿರುವುದರಿಂದ ಪ್ರಮುಖ ಪ್ರಾದೇಶಿಕ ವಾಯುಯಾನ ಮತ್ತು ವ್ಯಾಪಾರ ಚಟುವಟಿಕೆಗಳ ಮೇಲೆ ಸಂಘರ್ಷದ ಪರಿಣಾಮ ಹೆಚ್ಚಾಗಿದೆ.
ಇನ್ನೊಂದೆಡೆ, ಬಹರೈನ್ ಆಂತರಿಕ ಸಚಿವಾಲಯ ವಾಯುದಾಳಿ ಎಚ್ಚರಿಕೆಗಳನ್ನು ಸಕ್ರಿಯಗೊಳಿಸಿದ್ದು, ನಿವಾಸಿಗಳು ತಕ್ಷಣ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದೆ. ರಾಜಧಾನಿ ಮನಾಮವನ್ನು ಹತ್ತಿರದ ಪಟ್ಟಣಗಳಿಗೆ ಸಂಪರ್ಕಿಸುವ ಶೇಖ್ ಖಲೀಫಾ ಬಿನ್ ಸಲ್ಮಾನ್ ಸೇತುವೆಯನ್ನು ಮುಚ್ಚಲಾಗಿದೆ. "ಅಗತ್ಯವಿದ್ದಾಗ ಮಾತ್ರ ಮುಖ್ಯ ರಸ್ತೆಗಳನ್ನು ಬಳಸಬೇಕು" ಎಂದು ಸರ್ಕಾರ ಸೂಚನೆ ನೀಡಿದೆ.
ಸಾವುನೋವುಗಳ ವಿವರಗಳ ಪ್ರಕಾರ, ಕುವೈತ್‌ನಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಯುಎಇಯಲ್ಲಿ ಮೂವರು ಸಾವನ್ನಪ್ಪಿದ್ದು, ಖತರ್‌ನಲ್ಲಿ 16 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಯುಎಸ್-ಇಸ್ರೇಲಿ ದಾಳಿಗಳ ಪರಿಣಾಮವಾಗಿ ಇರಾನ್‌ನಲ್ಲಿ ಕನಿಷ್ಠ 201 ಮಂದಿ ಸಾವನ್ನಪ್ಪಿದ್ದು, 747 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, 121 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
'ಅಮೆರಿಕನ್ ಗುರಿಗಳ ಮೇಲೆಯೇ ದಾಳಿ' - ಇರಾನ್ ಸ್ಪಷ್ಟನೆ
ಅಮೆರಿಕ, ಬಹರೈನ್, ಜೋರ್ಡಾನ್, ಕುವೈತ್, ಖತರ್, ಸೌದಿ ಅರೇಬಿಯಾ ಮತ್ತು ಯುಎಇಗಳು ರವಿವಾರ ಜಂಟಿ ಹೇಳಿಕೆ ನೀಡಿ, ಈ ಪ್ರದೇಶದಾದ್ಯಂತ ನಡೆದಿರುವ ಇರಾನಿನ ದಾಳಿಗಳನ್ನು ಖಂಡಿಸಿವೆ. ತಮ್ಮ ಪ್ರದೇಶಗಳು, ನಾಗರಿಕರು ಮತ್ತು ನಿವಾಸಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹಾಗೂ ಆತ್ಮರಕ್ಷಣೆಯ ಹಕ್ಕನ್ನು ಬಳಸಿಕೊಳ್ಳುವುದಾಗಿ ರಾಷ್ಟ್ರಗಳು ಸ್ಪಷ್ಟಪಡಿಸಿವೆ.
ಆದಾಗ್ಯೂ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಟೆಹ್ರಾನ್ ತನ್ನ ಗಲ್ಫ್ ನೆರೆ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. "ಪರ್ಷಿಯನ್ ಕೊಲ್ಲಿಯ ಇನ್ನೊಂದು ಬದಿಯಲ್ಲಿರುವ ದೇಶಗಳೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಎಲ್ಲರೊಂದಿಗೂ ಸ್ನೇಹಪರ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ," ಎಂದು ಅವರು ತಿಳಿಸಿದ್ದಾರೆ.
"ನಾವು ಪರ್ಷಿಯನ್ ಕೊಲ್ಲಿಯಲ್ಲಿರುವ ನಮ್ಮ ಸಹೋದರರ ಮೇಲೆ ದಾಳಿ ಮಾಡುತ್ತಿಲ್ಲ. ನಮ್ಮ ನೆರೆಹೊರೆಯವರ ಮೇಲೆ ದಾಳಿ ನಡೆಸುವುದಿಲ್ಲ. ನಮ್ಮ ವಿರುದ್ಧ ಅಮೆರಿಕ ನಡೆಸುತ್ತಿರುವ ಆಕ್ರಮಣಕ್ಕೆ ಆತ್ಮರಕ್ಷಣೆ ಹಾಗೂ ಪ್ರತೀಕಾರವಾಗಿ ಅಮೆರಿಕನ್ ನೆಲೆಗಳ ಮೇಲೆಯೇ ದಾಳಿ ಮಾಡುತ್ತಿದ್ದೇವೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

