ಫ್ಲೊರಿಡಾ: ಜೆಫ್ರಿ ಎಪ್‌ಸ್ಟೈನ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ವಾಹನ ಚಲಾಯಿಸುತ್ತಿರುವುದನ್ನು ನೋಡಿದ್ದೇವೆ ಎಂಬ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭಿಸಿದ ಬೆನ್ನಲ್ಲೇ, ಫ್ಲೋರಿಡಾದ ವ್ಯಕ್ತಿಯೊಬ್ಬರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಫ್ಲೊರಿಡಾದ ಆಂಡ್ರ್ಯೂ ಪೋಸಿ ಎಂಬುವವರು ಮಾರ್ಚ್ 13 ರಂದು ವಿಡಿಯೊ ಒಂದನ್ನು ಹಂಚಿಕೊಂಡಿದ್ದರು. ಆ ವ್ಯಕ್ತಿಯು ನೋಡಲು ಎಪ್‌ಸ್ಟೈನ್ ರೀತಿ ಇದ್ದಾರೆ ಎಂಬ ಕಾರಣಕ್ಕೆ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು. ವಿಡಿಯೊದಲ್ಲಿದ್ದ ವ್ಯಕ್ತಿಯು ಸನ್‌ಗ್ಲಾಸ್ ಮತ್ತು ಬಿಳಿ ಟೋಪಿ ಧರಿಸಿಕೊಂಡು ವಾಹನ ಚಲಾಯಿಸಿದ್ದರು.
ವಿಡಿಯೊವನ್ನು ಆಂಡ್ರ್ಯೂ ಪೋಸಿ ಎಂಬುವವರು ಹಂಚಿಕೊಂಡು, ಶೀರ್ಷಿಕೆಯಲ್ಲಿ 'ಎಪ್‌ಸ್ಟೈನ್ ದಕ್ಷಿಣ ಫ್ಲೋರಿಡಾದಲ್ಲಿ ಇದ್ದಾರೆ' ಎಂದು ಬರೆದುಕೊಂಡಿದ್ದರು. ಈ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ.
ವಿಡಿಯೊ ವ್ಯಾಪಕವಾಗಿ ಹರಿದಾಡಲು ಪ್ರಾರಂಭವಾದ ಬಳಿಕ, ಸ್ವತಃ ವಿಡಿಯೊದಲ್ಲಿದ್ದ ವ್ಯಕ್ತಿಯೇ ಮತ್ತೊಂದು ವಿಡಿಯೊ ಮಾಡಿ, ತಾನು ಯಾರು? ಎಂಬುದರ ಕುರಿತು ಸ್ಪಷ್ಟನೆ ನೀಡಿದ್ದಾರೆ.
ತನ್ನ ಹೆಸರು ಪಾಮ್ ಬೀಚ್ ಪೀಟ್ ಎಂದು ಹೇಳಿಕೊಂಡಿರುವ ವ್ಯಕ್ತಿಯು, 'ನಾನು ಅವನಲ್ಲ' ಎಂದು ಹೇಳಿದ್ದಾರೆ.
ತಾವೊಬ್ಬ ಮಾಜಿ ಟೆನ್ನಿಸ್ ಆಟಗಾರ, ಚಿನ್ನದ ಪದಕ ವಿಜೇತ ಕ್ರೀಡಾಪಟು ಪೀಟ್ ಎಂದು ಹೇಳಿದ್ದಾರೆ. ಆ ವಿಡಿಯೊ ರೆಕಾರ್ಡ್ ಮಾಡುವಾಗ ತಾವು ಟೆನಿಸ್ ಆಡಲು ಹೋಗುತ್ತಿದ್ದೆ ಎಂದಿದ್ದಾರೆ. ಮಾತ್ರವಲ್ಲ, ತಾವು ಫ್ಲೋರಿಡಾದ ಸೊಹೊದಲ್ಲಿ ವಾಸವಾಗಿದ್ದು, ಪ್ರಸ್ತುತ ಫ್ಯಾಷನ್ ಉದ್ಯಮಿ ಮತ್ತು ಮಾಜಿ ರಿಯಲ್ ಎಸ್ಟೇಟ್ ಕಾರ್ಯನಿರ್ವಾಹಕ ಎಂದು ಹೇಳಿಕೊಂಡಿದ್ದಾರೆ.

