ಕೋಲ್ಕತ್ತ: ಮುಂಬರುವ ವಿಧಾನಸಭಾ ಚುನಾವಣೆಯ ಬಳಿಕ ಕೇಂದ್ರ ಸರ್ಕಾರ ಎನ್‌ಆರ್‌ಸಿ ಮತ್ತು ಜನಗಣತಿಯ ಹೆಸರಿನಲ್ಲಿ ಜನರ ಪೌರತ್ವ ಕಸಿದುಕೊಳ್ಳಲು ಯೋಜಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ತಕ್ಷಣ ಎನ್‌ಆರ್‌ಸಿ ಜಾರಿಗೊಳಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಸಂಚು ನಡೆಯುತ್ತಿದೆ.
ಈ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣೆಗೂ ಮುನ್ನವೇ ಅಘೋಷಿತ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಿಸಲು ಚುನಾವಣಾ ಆಯೋಗವು ರಾಜ್ಯದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಈ ಮೂಲಕ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಬಂಗಾಳಕ್ಕೆ ಅಕ್ರಮವಾಗಿ ಸಾಗಿಸಲು ದಾರಿ ಮಾಡಿಕೊಡಲಾಗುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಉದ್ದೇಶದಿಂದಾಗಿ ಕೇಂದ್ರದೊಂದಿಗೆ ಕೈಜೋಡಿಸಿರುವ ಚುನಾವಣಾ ಆಯೋಗವು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಆರಂಭಿಸಲು ಯೋಚಿಸುತ್ತಿದೆ ಎಂದು ಮಮತಾ ದೂರಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿಸಲಾಗುತ್ತಿದೆ. ಸುಮಾರು 60 ಲಕ್ಷ ಪ್ರಕರಣಗಳಲ್ಲಿ 22 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿದ್ದರೆ, ಇನ್ನೂ 10 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಅಳಸಿ ಹಾಕಲಾಗಿದೆ ಎಂದು ಆರೋಪಿಸಿರುವ ಮಮತಾ, ಚುನಾವಣೆಯಲ್ಲಿ ಸೋಲುವ ಭೀತಿಯಿಂದಲೇ ಬಿಜೆಪಿ ಇಂತಹ ಕಾರ್ಯಗಳಿಗೆ ಮುಂದಾಗಿದೆ ಎಂದಿದ್ದಾರೆ.

