ಪಟ್ನಾ: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ (ಒಐಅ) ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
ಜೆಡಿಯು ಮುಖ್ಯಸ್ಥರಾದ ನಿತೀಶ್ ಕುಮಾರ್ ಮಾರ್ಚ್ 16ರಂದು ರಾಜ್ಯಸಭೆಗೆ (ಸಂಸತ್ತಿನ ಮೇಲ್ಮನೆ) ಆಯ್ಕೆಯಾಗಿದ್ದರು.
1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ನಿತೀಶ್ ಕುಮಾರ್ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಪ್ರವೇಶಿಸಿದ್ದರು. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2005ರಲ್ಲಿ ಎನ್‌ಡಿಎ ಬೆಂಬಲದೊಂದಿಗೆ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ರಾಜಕೀಯ ವಿರೋಧಿಗಳಿಂದ 'ಪಲ್ಟು ರಾಮ್' ಎಂಬ ಅಡ್ಡ ಹೆಸರಿನಿಂದಲೂ, ಬೆಂಬಲಿಗ ರಿಂದ 'ಸುಶಾಸನ ಬಾಬು' (ಉತ್ತಮ ಆಡಳಿತಗಾರ) ಎಂಬ ಪ್ರಶಂಸೆಗೂ ಪಾತ್ರರಾಗಿರುವ ನಿತೀಶ್ ಕುಮಾರ್ 2025ರಲ್ಲಿ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದು ಬಿಹಾರದ ರಾಜಕೀಯ ಚಿತ್ರಣವನ್ನೇ ಬದಲಿಸಬಹುದು ಎನ್ನಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವ ಸಾಧ್ಯತೆಯಿದ್ದು, ಪಟ್ನಾದಲ್ಲಿ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯಸಭೆಗೆ ಆಯ್ಕೆಯಾದ 14 ದಿನಗಳಲ್ಲಿ ರಾಜೀನಾಮೆ ನೀಡಬೇಕು. ಅದರಂತೆಯೇ ಎಲ್ಲವೂ ನಡೆಯಲಿದೆ ಎಂದು ಜೆಡಿ(ಯು) ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಕಳೆದ ವಾರ ಹೇಳಿದ್ದರು.

