ವ್ಯಾಂಕೋವರ್: ಕೆನಡಾದ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಚಾಟ್‌ಜಿಪಿಟಿಯ ಮಾತೃಸಂಸ್ಥೆ ಒಪನ್‌ಎಐಗೆ ಮೊದಲೆ ತಿಳಿದಿತ್ತು ಎಂದು ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಒಪನ್ ಎಐ ವಿರುದ್ಧ ಬ್ರಿಟಿಷ್ ಕೊಲಂಬಿಯಾದ ಸುಪ್ರೀಂ ಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾರೆ.
ಫೆಬ್ರುವರಿ 10ರಂದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಟಂಬ್ಲರ್ ರಿಡ್ಜ್ ನಗರದಲ್ಲಿರುವ 'ಟಂಬ್ಲರ್ ರಿಡ್ಜ್ ಹೈಸ್ಕೂಲ್' ಪ್ರೌಢಶಾಲೆಗೆ ನುಗಿದ್ದ ಜೆಸ್ಸಿ ವ್ಯಾನ್ ರೂಸ್ಟ್‌ಸೆಲಾರ್ ಎಂಬ ಮಹಿಳೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ 10 ಜನರು ಮೃತಪಟ್ಟಿದ್ದರು ಬಳಿಕ ಜೆಸ್ಸಿ ವ್ಯಾನ್ ರೂಸ್ಟ್‌ಸೆಲಾರ್ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಗುಂಡಿನ ದಾಳಿಯಲ್ಲಿ ಹನ್ನೆರಡು ವರ್ಷದ ಮಾಯಾ ಗೆಬಾಲಾ ಎಂಬ ವಿದ್ಯಾರ್ಥಿನಿ ತಲೆಗೆ ಗುಂಡೇಟು ತಗುಲಿತ್ತು. ಆಕೆ ಗಂಭೀರವಾಗಿ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೀಗ ಆಕೆಯ ಪೋಷಕರು ಓಪನ್ ಎಐ ವಿರುದ್ಧ ದೂರು ದಾಖಲಿಸಿದ್ದಾರೆ.
ಟಂಬ್ಲರ್ ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಯುವುದಕ್ಕೂ ಮೊದಲೇ ಜೆಸ್ಸಿ ವ್ಯಾನ್ ರೂಸ್ಟ್‌ಸೆಲಾರ ಚಟುವಟಿಕೆಯನ್ನು ಓಪನ್ ಎಐ ಗಮನಿಸಿತ್ತು. ಆದರೆ, ಈ ಬಗ್ಗೆ ಪೊಲೀಸರಿಗೆ ಮುನ್ಸೂಚನೆ ನೀಡದಿರಲು ನಿರ್ಧರಿಸಿದೆವು ಎಂದು ಒಪನ್ ಎಐ ಹೇಳಿದೆ.
ಜೆಸ್ಸಿ ವ್ಯಾನ್ ರೂಸ್ಟ್‌ಸೆಲಾರ್ ಚಾಟ್ಜಿಪಿಟಿಯಲ್ಲಿ ದಾಳಿ ಹೇಗೆ ನಡೆಸಬೇಕು, ಸಾಮೂಹಿಕ ಹತ್ಯೆ ಮಾಡುವುದು ಹೇಗೆ ಎಂದು ತಡಕಾಡಿದ್ದರು. ಇದನ್ನು ತಿಳಿದು ಆಕೆಯ ಖಾತೆಯನ್ನು ಬಂದ್ ಮಾಡಲಾಗಿತ್ತು. ಆದರೆ ಜೆಸ್ಸಿ ವ್ಯಾನ್ ರೂಸ್ಟ್‌ಸೆಲಾರ್ ಎರಡನೇ ಖಾತೆ ತೆರಿದಿದ್ದಳು ಎಂದು ಒಪನ್ ಎಐ ಹೇಳಿದೆ.
ಆರೋಪಿಯು ಚಾಟ್‌ಜಿಪಿಟಿಯನ್ನು ವಿಶ್ವಾಸಾರ್ಹ ಆಪ್ತಮಿತ್ರನಾಗಿ ಬಳಿಸಿಕೊಂಡಿದ್ದಾಳೆ. ದಾಳಿಕೋರರಿಗೆ ಇಂತಹ ಕೃತ್ಯವನ್ನು ಯೋಜಿಸಲು ಚಾಟ್‌ಜಿಪಿಟಿ ಸಹಾಯ ಮಾಡುತ್ತದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
ದಾಳಿಕೋರಳ ಚಟುವಟಿಕೆ ಅರಿತ ಕಂಪನಿಯು ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಸಂಭಾವ್ಯ ದಾಳಿಯನ್ನು ತಡೆಯಬಹುದಿತ್ತು. ಆದರೆ, ಕಂಪನಿ ಇದರಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

