ವಿಶ್ವಸಂಸ್ಥೆ: ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯು ದಾಳಿಯು ಅಂತರರಾಷ್ಟ್ರೀಯ ಕಾನೂನಿನ 'ಸ್ಪಷ್ಟ ಉಲ್ಲಂಘನೆ' ಎಂದು ಭಾರತ ಖಂಡಿಸಿದ್ದು, ರಂಜಾನ್ ಸಮಯದಲ್ಲೇ ದಾಳಿ ಮಾಡಿ ನಾಗರಿಕರನ್ನು ಕೊಲ್ಲುವ ಪಾಕಿಸ್ತಾನವು ಇಸ್ಲಾಮಿಕ್ ಒಗ್ಗಟ್ಟಿಗಾಗಿ ಕರೆ ನೀಡುವುದು 'ಬೂಟಾಟಿಕೆ' ಎಂದು ಹೇಳಿದೆ.
ಅಫ್ಗಾನಿಸ್ತಾನದ ಪರಿಸ್ಥಿತಿಯ ಕುರಿತು ಸೋಮವಾರ ನಡೆದ ಭದ್ರತಾ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಹರೀಶ್ ಪರ್ವತನೇನಿ, ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಲು ಮತ್ತು ನಾಗರಿಕರ ರಕ್ಷಣೆ ಖಚಿತಪಡಿಸಿಕೊಳ್ಳುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡಿದ್ದ ಕರೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.
'ಅಫ್ಗಾನಿಸ್ತಾನದ ಮೇಲೆ ನಡೆದ ದಾಳಿಯು ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಸನ್ನದು ಮತ್ತು ರಾಷ್ಟ್ರದ ಸಾರ್ವಭೌಮತ್ವ ತತ್ತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ದಾಳಿಯಿಂದಾಗಿ ಮಾರ್ಚ್ 6ರ ವೇಳೆಗೆ 185 ಮುಗ್ಧ ನಾಗರಿಕರು ಮೃತಪಟ್ಟಿದ್ದಾರೆ' ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ನೆರವು ಸಂಸ್ಥೆಯ ಪ್ರಕಾರ, ಬಲಿಯಾದ 185 ಜನರಲ್ಲಿ ಶೇ 55ರಷ್ಟು ಮಹಿಳೆಯರು ಮತ್ತು ಮಕ್ಕಳಾಗಿದ್ದರು ಮತ್ತು ದಾಳಿಗಳಿಂದ ಲಕ್ಕಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.

