ಮುಂಬೈ: ಉದ್ಯಮಿ ಅನಿಲ್ ಅಂಬಾನಿಯವರು ರಿಪಬ್ಲಿಕ್ ಟಿವಿ ಮತ್ತು ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ತನ್ನ ಹಣಕಾಸು ವಹಿವಾಟುಗಳ ಕುರಿತು ಸುದ್ದಿವಾಹಿನಿಯಲ್ಲಿ ಪ್ರಸಾರಗೊಂಡ ವರದಿಗಳು ತನ್ನ ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡಿವೆ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ನ್ಯಾ.ಮಿಲಿಂದ ಜಾಧವ ಅವರು ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎಆರ್‌ಜಿ ಔಟ್‌ಲೈಯರ್,ಗೋಸ್ವಾಮಿ ಮತ್ತು ಇತರ ಅಪರಿಚಿತ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಪ್ರತಿವಾದಿಗಳು ಬರೆದು ಪ್ರಕಟಿಸಿದ ಹಾಗೂ ಅವರ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಸಾರಗೊಂಡ ಲೇಖನಗಳಿಂದ ತಾನು ನೊಂದಿದ್ದೇನೆ ಎಂದು ಅಂಬಾನಿ ಹೇಳಿದ್ದಾರೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ.(ಆರ್‌ಕಾಮ್),ರಿಲಯನ್ಸ್ ಹೋಮ್ ಫೈನಾನ್ಸ್ ಲಿ. ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿ.ವಿರುದ್ಧ ಜಾರಿ ನಿರ್ದೇಶನಾಲಯವು ಆರಂಭಿಸಿರುವ ನಿಯಂತ್ರಕ ಪ್ರಕ್ರಿಯೆಗಳ ಬಗ್ಗೆ ವರದಿ ಮಾಡುತ್ತಿರುವುದಾಗಿ ಈ ಆಕ್ಷೇಪಾರ್ಹ ಲೇಖನಗಳು ಮತ್ತು ಹೇಳಿಕೆಗಳು ಉಲ್ಲೇಖಿಸಿದ್ದವು. ಅಂಬಾನಿ ನ.2019ರಲ್ಲಿ ಆರ್‌ಕಾಮ್‌ನ ಕಾರ್ಯ ನಿರ್ವಾಹಕೇತರ ನಿರ್ದೇಶಕ ಹುದ್ದೆಯನ್ನು ತೊರೆದಿದ್ದಾರೆ ಮತ್ತು ಇತರ ಕಂಪನಿಗಳಲ್ಲಿ ಯಾವುದೇ ವ್ಯವಸ್ಥಾಪನೆ ಅಥವಾ ಕಾರ್ಯಾಚರಣೆಯ ಹುದ್ದೆಯನ್ನು ಹೊಂದಿರಲಿಲ್ಲ ಎನ್ನುವದು ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿಗೆ ತಿಳಿದಿತ್ತು. ಕಂಪನಿಗಳು ಪ್ರತ್ಯೇಕ ಘಟಕಗಳಾಗಿದ್ದವು ಮತ್ತು ಅರ್ಜಿದಾರರು ಕಂಪನಿಗಳ ದೈನಂದಿನ ನಿರ್ವಹಣೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲ ಭಾಗಿಯಾಗಿರಲಿಲ್ಲ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಈ ಎಲ್ಲ ವಿಚಾರಗಳು ಗೊತ್ತಿದ್ದರೂ ಪ್ರತಿವಾದಿಗಳು ದುರುದ್ದೇಶಪೂರ್ವಕವಾಗಿ ಮತ್ತು ಬೇಜವಾಬ್ದಾರಿಯಿಂದ ಕಂಪನಿಗಳಿಗೆ ಸಂಬಂಧಿಸಿದಂತೆ ತನಿಖೆಯಲ್ಲಿರುವ ಆರೋಪಗಳಿಗೂ ಅರ್ಜಿದಾರರಿಗೂ ಮಾನಹಾನಿಕರವಾಗಿ ತಳುಕು ಹಾಕಿದ್ದರು ಎಂದು ಅಂಬಾನಿ ಆರೋಪಿಸಿದ್ದಾರೆ.

