ಆ ಮೂಲಕ ಕಮರ್ಷಿಯಲ್ ಅಲ್ಲದ ವಾಹನಗಳ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಶುಲ್ಕದಲ್ಲಿ ಏರಿಕೆಯಾಗಲಿದೆ. ಖಾಸಗಿ ಕಾರುಗಳು, ಜೀಪ್, ವ್ಯಾನ್ಗಳ ವಾರ್ಷಿಕ ಪಾಸ್‌ನ ಬೆಲೆ 3,000 ರುಪಾಯಿಯಿಂದ 3,075 ರುಪಾಯಿಗೆ ಹೆಚ್ಚಿಸಲಾಗಿದೆ. ಏಪ್ರಿಲ್ 1ರಿಂದ ಹೊಸ ದರಗಳು ಜಾರಿಗೆ ಬರುತ್ತವೆ ಎಂದು ಮೂಲಗಳು ತಿಳಿಸಿವೆ.
ʼʼ2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳ ನಿಬಂಧನೆಗಳಿಗೆ ಅನುಗುಣವಾಗಿ ಶುಲ್ಕ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ" ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಯಾರಿಗೆಲ್ಲ ಅನ್ವಯ?
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ವಾರ್ಷಿಕ ಪಾಸ್ ಸೌಲಭ್ಯವನ್ನು ಬಳಸಲು ಬಯಸುವ ಫಾಸ್ಟ್‌ಟ್ಯಾಗ್ ಹೊಂದಿರುವ ವಾಣಿಜ್ಯೇತರ ವಾಹನಗಳಿಗೆ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ವಾರ್ಷಿಕ ಪಾಸ್‌ನ ಅನುಕೂಲವೆಂದರೆ ಖಾಸಗಿ ವಾಹನ ಮಾಲಕರು ತಮ್ಮ ಫಾಸ್ಟ್‌ಟ್ಯಾಗ್ ಖಾತೆಗಳನ್ನು ಪದೇ ಪದೆ ರೀಚಾರ್ಜ್ ಮಾಡುವ ಬದಲು ಒಂದು ಬಾರಿ ಶುಲ್ಕವನ್ನು ಪಾವತಿಸಿದರೆ ಸಾಕು ಎಂದು ಎನ್‌ಎಚ್‌ಎಐ ಹೇಳಿದೆ. ಈ ಪಾಸ್ ಒಂದು ವರ್ಷ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳವರೆಗೆ ಮಾನ್ಯವಾಗಿರುತ್ತದೆ. ಯಾವುದು ಮೊದಲು ಬರುತ್ತದೆಯೋ ಅಲ್ಲಿಗೆ ಪಾಸ್ ಅವಧಿ ಮುಕ್ತಾಯವಾಗುತ್ತದೆ.
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಹೆಚ್ಚಳ:
ಹೆದ್ದಾರಿಗಳಲ್ಲಿ ಪದೇ ಪದೆ ಸಂಚರಿಸುವ ವಾಹನ ಮಾಲಕರ ಅನುಕೂಲಕ್ಕಾಗಿ 2025ರ ಆಗಸ್ಟ್ 15ರಂದು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಪರಿಚಯಿಸಲಾಯಿತು. ಸರ್ಕಾರದ ಪ್ರಕಾರ, ಇಲ್ಲಿಯವರೆಗೆ 56 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.
ಖರೀದಿಸುವುದು ಹೇಗೆ?
ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್ ಅಥವಾ ಎನ್‌ಎಚ್‌ಎಐ ವೆಬ್‌ಸೈಟ್ ಮೂಲಕ ಪಾಸ್ ಖರೀದಿಸಬಹುದು. ಪಾಸ್ ಖರೀದಿಸುವ ಹಂತ ಹಂತದ ವಿವರ ಇಲ್ಲಿದೆ.
ರಾಜ್‌ಮಾರ್ಗ್ ಯಾತ್ರಾ
- ಮೊಬೈಲ್‌ನಲ್ಲಿ ರಾಜಮಾರ್ಗ ಯಾತ್ರಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ.
- ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ.
- ವಾಹನದ ಫಾಸ್ಟ್‌ಟ್ಯಾಗ್ ಅಕೌಂಟ್‌ಗೆ ಲಿಂಕ್ ಮಾಡಿ.
- ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಆಯ್ಕೆ ಸೆಲೆಕ್ಟ್ ಮಾಡಿ.
- ನಿಮ್ಮ ವಾಹನವನ್ನು ಸೆಲೆಕ್ಟ್ ಮಾಡಿ ಮತ್ತು ಖರೀದಿಯನ್ನು ಖಚಿತಪಡಿಸಿ.
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ.
ಎನ್‌ಎಚ್‌ಎಐ ವೆಬ್‌ಸೈಟ್
- ಎನ್‌ಎಚ್‌ಎಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ
ಇಲ್ಲಿ ಕ್ಲಿಕ್ ಮಾಡಿ (https://nhai.gov.in/#/) - ಅಗತ್ಯ ಮಾಹಿತಿ ನೀಡಿ ಲಾಗಿನ್ ಆಗಿ.
- ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ನಿಮ್ಮ ವಾಹನ ಅಥವಾ ಫಾಸ್ಟ್‌ಟ್ಯಾಗ್‌ನ ಮಾಹಿತಿ ನೀಡಿ.
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ.

