ಟೆಹರಾನ್: ಇರಾನ್ ಬೆಂಬಲಿತ, ಯೆಮನ್‌ನ ಹೂಥಿ ಬಂಡುಕೋರರು ಪಶ್ಚಿಮ ಏಷ್ಯಾ ಸಂಘರ್ಷ ಕಣ ಪ್ರವೇಶಿಸಿರುವುದಾಗಿ ಘೋಷಿಸಿಕೊಂಡಿದ್ದು, ಇಸ್ರೇಲ್ ವಿರುದ್ಧ ಶನಿವಾರ ಕ್ಷಿಪಣಿ ದಾಳಿ ನಡೆಸಿದ್ದಾರೆ.
ಹೂಥಿ ಬಂಡುಕೋರರ ಪ್ರವೇಶದಿಂದ ಕೆಂಪು ಸಮುದ್ರದ ಮೂಲಕ ಸರಕು ಸಾಗಾಣಿಕೆ ಹಡಗುಗಳ ಸಂಚಾರಕ್ಕೆ ಅಡ್ಡಿ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಸೌದಿ ಅರೇಬಿಯಾ ತನ್ನ ಭಾಗಶಃ ತೈಲ ರಫ್ತನ್ನು ಕೆಂಪು ಸಮುದ್ರದ ಯಾನ್ಬು ಬಂದರಿನ ಮೂಲಕ ನಿರ್ವಹಿಸುತ್ತಿದೆ.
ಹೂಥಿ ಬಂಡುಕೋರರ ಪ್ರವೇಶದಿಂದ ಹೊಸದಾಗಿ 'ಕೆಂಪು ಸಮುದ್ರ ಸಂಘರ್ಷ' ಆರಂಭಗೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ ಎಂದು ಮೂಲಗಳು ಹೇಳಿವೆ.
ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆ ಮೇಲೆ ಯೆಮನ್‌ನಿಂದ ದಾಳಿ ನಡೆದಿರುವುದನ್ನು ಇಸ್ರೇಲ್ ಸೇನೆ ದೃಢಪಡಿಸಿದೆ.
ಅಮೆರಿಕ ಸೇನಾನೆಲೆ ಮೇಲೆ ದಾಳಿ: ಸೌದಿ ಅರೇಬಿಯಾದಲ್ಲಿನ ಅಮೆರಿಕದ ಸೇನಾ ನೆಲೆಯನ್ನು ಗುರಿಯಾಗಿಸಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ 10ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ.
ಪ್ರಿನ್ಸ್ ಸುಲ್ತಾನ್ ಸೇನಾ ನೆಲೆಯನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇಂಧನ ಭರ್ತಿ ಮಾಡುವ ಅಮೆರಿಕದ ಹಲವು ವಿಮಾನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಇರಾನ್ ಮಿಲಿಟರಿಯನ್ನು ತಟಸ್ಥಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಹೆಗ್ಸತ್ ಬೆದರಿಕೆ ಹಾಕಿದ ಬೆನ್ನಲ್ಲೇ, ಇರಾನ್ ಸೇನೆ ಅಮೆರಿಕದ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.

