ರಮಲ್ಲಾ : ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಬೀಡುಬಿಟ್ಟಿರುವ ಇಸ್ರೇಲಿ ಪ್ರಜೆಗಳು ಸಮೀಪದ ಗ್ರಾಮಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿದ ಪರಿಣಾಮ, 10 ಮಂದಿ ಪ್ಯಾಲೆಸ್ಟೀನಿಯರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ದೀರ್-ಅಲ್-ಹತಬ್, ನಬ್ಲಸ್ ಸೇರಿದಂತೆ ವೆಸ್ಟ್ ಬ್ಯಾಂಕ್‌ನ ಸಮೀಪದಲ್ಲಿರುವ ಗ್ರಾಮಗಳಲ್ಲಿ ಇಸ್ರೇಲಿ ಪ್ರಜೆಗಳು ದಾಳಿ ನಡೆಸಿದ್ದು, ಪ್ಯಾಲೆಸ್ಟೀನಿಯರ ಮನೆಗಳಿಗೆ, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.
ಅಲ್ಲದೇ, ಒಬ್ಬ ವ್ಯಕ್ತಿಯ ಕಾಲಿಗೂ ಗುಂಡು ಹಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾರುಗಳನ್ನು ಜಖಂಗೊಳಿಸುತ್ತಿರುವ ವಿಡಿಯೊಗಳು ಕೂಡ ಲಭ್ಯವಾಗಿವೆ.
ಇತ್ತೀಚೆಗಷ್ಟೇ ಇದೇ ಗ್ರಾಮಗಳ ಸಮೀಪದ ಪ್ರದೇಶವೊಂದರಲ್ಲಿ ಪ್ಯಾಲೆಸ್ಟೀನಿ ವಾಹನವೊಂದಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಸ್ರೇಲಿ ಯುವಕನೊಬ್ಬ ಮೃತಪಟ್ಟಿದ್ದ. ಈ ಅಪಘಾತವನ್ನು ಪ್ಯಾಲೆಸ್ಟೀನಿಯರು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆಂದು ಇಸ್ರೇಲಿ ಪ್ರಜೆಗಳು ಆರೋಪಿಸಿದ್ದಾರೆ. ಯುವಕನ ಸಾವಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ದಾಳಿ-ನಾಲ್ವರ ಸಾವು
ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ಪಡೆಗಳು ಭಾನುವಾರ ನಡೆಸಿದ ದಾಳಿಯಲ್ಲಿ ನಾಲ್ಕು ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ. ಕೇಂದ್ರ ನುಸೇರತ್‌ನ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದು ಇತರೆ 10 ಮಂದಿ ಗಾಯಗೊಂಡಿದ್ದಾರೆ. ಗಾಜಾ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಶಿಫಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

