ನೊಯ್ಡಾ(PTI):'ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಹಲವು ಸವಾಲುಗಳನ್ನು ಒಡ್ಡುತ್ತಿದ್ದು, ಭಾರತ ಇವುಗಳನ್ನು ತನ್ನೆಲ್ಲ ಶಕ್ತಿಯೊಂದಿಗೆ ಸಮರ್ಥವಾಗಿ ಎದುರಿಸುತ್ತಿದೆ. ದೇಶದ ಜನರ ಹಿತಾಸಕ್ತಿ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಇಲ್ಲಿಗೆ ಸಮೀಪದ ಜೆವರ್‌ನಲ್ಲಿ ನೂತನ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಪ್ರಸಕ್ತ ಬಿಕ್ಕಟ್ಟನ್ನು ದೇಶದ ಜನರು ಶಾಂತ ಚಿತ್ತ, ತಾಳ್ಮೆ ಹಾಗೂ ಒಗ್ಗಟ್ಟಿನಿಂದ ಎದುರಿಸಬೇಕು. ಇದು ಜಾಗತಿಕ ಬಿಕ್ಕಟ್ಟು ಆಗಿದ್ದರೂ ಭಾರತದ ಹಿತಾಸಕ್ತಿಗಳ ರಕ್ಷಣೆಯೇ ನಮ್ಮ ಆದ್ಯತೆಯಾಗಬೇಕು. ಇದೇ ನಮ್ಮ ದೊಡ್ಡ ಶಕ್ತಿ' ಎಂದು ಮೋದಿ ಹೇಳಿದರು.
'ಪಶ್ಚಿಮ ಏಷ್ಯಾ ಯುದ್ಧದಿಂದಾಗುತ್ತಿರುವ ಪರಿಣಾಮಗಳ ಕುರಿತು ಸಂಸತ್‌ನಲ್ಲಿಯೂ ನಾನು ಚರ್ಚಿಸಿದ್ದೇನೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೂ ವ್ಯಾಪಕ ಸಮಾಲೋಚನೆ ನಡೆಸಿರುವೆ' ಎಂದ ಅವರು, 'ಇಂತಹ ಸಂಕಷ್ಟದ ಸಮಯದಲ್ಲಿ ರಾಜಕೀಯ ಪಕ್ಷಗಳು, ವಿಶೇಷವಾಗಿ ಉತ್ತರ ಪ್ರದೇಶದಲ್ಲಿನ ಪಕ್ಷಗಳು ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು' ಎಂದು ಮನವಿ ಮಾಡಿದರು.
'ದೇಶದ 140 ಕೋಟಿ ಜನರು ಒಟ್ಟಾಗಿ ಶ್ರಮಿಸಿದಾಗ 'ವಿಕಸಿತ ಭಾರತ' ಕನಸು ಸಾಕಾರಗೊಳ್ಳಲು ಸಾಧ್ಯ. ದೇಶದ ಜನರು ಒಗ್ಗಟ್ಟಾಗುವುದರಿಂದ ಜಾಗತಿಕ ವಿದ್ಯಮಾನಗಳು ಒಡ್ಡುವ ಸವಾಲುಗಳನ್ನು ಎದುರಿಸಲೂ ಸಾಧ್ಯವಾಗುವುದು' ಎಂದರು.
ನೂತನ ವಿಮಾನ ನಿಲ್ದಾಣ ಕುರಿತು ಪ್ರಸ್ತಾಪಿಸಿದ ಅವರು, 'ಈ ವಿಮಾನನಿಲ್ದಾಣ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದಲ್ಲಿ, ಇಲ್ಲಿಂದ ಪ್ರತಿ ಎರಡು ನಿಮಿಷಕ್ಕೊಂದು ವಿಮಾನ ಟೇಕಾಫ್ ಆಗಲಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಆರ್ಥಿಕ ಚಟುವಟಿಕೆ ಗಳಿಗೆ ವೇಗ ಸಿಗಲಿದ್ದು ರೈತರು, ಸಣ್ಣ ವರ್ತಕರು ಹಾಗೂ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ' ಎಂದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಉಪಸ್ಥಿತರಿದ್ದರು.

