ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಹಾಗೂ ಇದೇ ವಿಷಯಕ್ಕೆ ಸಂಬಂಧಿಸಿ ವಿಚಾರಣೆಗೆ ಬಾಕಿಯಿರುವ ಇತರ ಅರ್ಜಿಗಳ ಜೊತೆಗೆ ಅದನ್ನು ಅಡಕಗೊಳಿಸಿದೆ.
2005ರ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಳ್ಳಲಾದ ವೈಯಕ್ತಿಕ ದತ್ತಾಂಶದ ಪರಿಷ್ಕರಣೆ, ವಿಶ್ಲೇಷಣೆ, ಪ್ರಸರಣೆ ಹಾಗೂ ಮರು ಪ್ರಕಟಣೆಗೆ 2023ರ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲವೆಂದು ಘೋಷಿಸುವಂತೆ ಆದೇಶ ನೀಡಬೇಕೆಂದು ಕೋರಿ ಅಂಜಲಿ ಭಾರದ್ವಾಜ್ ಹಾಗೂ ಅಮೃತಾ ಜೋಹ್ರಿ ಎಂಬವರು ಅರ್ಜಿ ಸಲ್ಲಿಸಿದ್ದರು.
ಭ್ರಷ್ಟಾಚಾರವನ್ನು, ಸಾರ್ವಜನಿಕ ಹುದ್ದೆ ಅಥವಾ ಇಲಾಖೆಯ ದುರುಪಯೋಗವನ್ನು ಬಯಲಿಗೆಳೆಯುವರು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವೈಯಕ್ತಿಕ ದತ್ತಾಂಶವನ್ನು ಪ್ರಕಟಿಸುವವರಿಗೆ 2023ರ ಕಾಯ್ದೆಯ ನಿಯಮಗಳು ಅನ್ವಯವಾಗುವುದಿಲ್ಲವೆಂಬ ನಿರ್ದೇಶನ ನೀಡುವಂತೆಯೂ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ಕಾಯ್ದೆಯು ಸೆಕ್ಷನ್ 44(3) ಅಸಂವಿಧಾನಿಕವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್8 (1)ರ ಉಪವಾಕ್ಯ (ಜೆ) ಮಾಹಿತಿಯನ್ನು ಪಡೆಯುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಸಂವಿಧಾನದ 14 ಹಾಗೂ 19(1)(ಎ) ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ನ್ಯಾಯಪೀಠವು ಪ್ರಕರಣದ ಆಲಿಕೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ.

