ನವದೆಹಲಿ: ದಿವಾಳಿತನ ಮತ್ತು ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆಗೆ ಲೋಕಸಭೆ ಸೋಮವಾರ ಅಂಗೀಕಾರ ನೀಡಿದೆ.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.
2016ರಲ್ಲಿ ಜಾರಿಗೊಂಡಿದ್ದ ದಿವಾಳಿತನ ಮತ್ತು ದಿವಾಳಿತನ ಸಂಹಿತೆಗೆ (ಐಬಿಸಿ) 12 ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
ಇದು ಪಾಲುದಾರರ ಮೌಲ್ಯವನ್ನು ಗರಿಷ್ಠಗೊಳಿಸಲು ಮತ್ತು ಆಡಳಿತ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.
ತಿದ್ದುಪಡಿಗಳು ಅಸ್ತಿತ್ವದಲ್ಲಿರುವ ದಿವಾಳಿತನ ಚೌಕಟ್ಟನ್ನು ಬಲಪಡಿಸಲು, ಎದುರಾಗುವ ಸವಾಲುಗಳನ್ನು ಪರಿಹರಿಸಲು ಹಾಗೂ ವಿಕಸನಗೊಳ್ಳುತ್ತಿರುವ ಜಾಗತಿಕ ರೂಢಿಗಳನ್ನು ಅಳವಡಿಸಲು ಯತ್ನಿಸುತ್ತವೆ ಎಂದು ಹಣಕಾಸು ಸಚಿವರು ಹೇಳಿದರು.
ದೇಶದ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯ ಸುಧಾರಿಸುವಲ್ಲಿ ಈ ಕಾಯ್ದೆಯು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಿರ್ಮಲಾ ಅವರು ತಿಳಿಸಿದರು.
ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ-2025 ಅನ್ನು ಲೋಕಸಭೆಯು ಅಂಗೀಕರಿಸಿದೆ.
ಐಬಿಸಿ ತಿದ್ದುಪಡಿ ಮಾಡಲು ಸರ್ಕಾರವು 2025ರ ಆಗಸ್ಟ್ 12ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿತ್ತು.
ದಿವಾಳಿತನ ಪರಿಹಾರ ಅರ್ಜಿಗಳನ್ನು ವಿಲೇವಾರಿಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ನಿಬಂಧನೆಗಳು ಒಳಗೊಂಡಂತೆ ಹಲವು ಬದಲಾವಣೆಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಮಸೂದೆಯನ್ನು ಲೋಕಸಭೆಯ ಪರಿಶೀಲನಾ ಸಮಿತಿಗೆ ಕಳುಹಿಸಲಾಗಿತ್ತು. ಸಮಿತಿಯು 2025ರ ಡಿಸೆಂಬರ್‌ನಲ್ಲಿ ತನ್ನ ವರದಿ ಸಲ್ಲಿಸಿತ್ತು.
ಸಮಿತಿಯ ಎಲ್ಲ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಮಸೂದೆಯಲ್ಲಿನ ಪ್ರಮುಖ ಅಂಶಗಳು
ದಿವಾಳಿತನ ಪರಿಹಾರ ಪ್ರಕ್ರಿಯೆ ಆರಂಭಿಸುವ ಅರ್ಜಿಯನ್ನು 14 ದಿನಗಳಲ್ಲಿ ಒಪ್ಪಿಕೊಳ್ಳಬೇಕು
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಐಬಿಸಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸಬೇಕು
ಹೂಡಿಕೆದಾರರ ವಿಶ್ವಾಸ ಉತ್ತೇಜಿಸಲು ಕ್ರಮ
ಪ್ರಕ್ರಿಯೆ ವಿಳಂಬ ಕ್ಷುಲ್ಲಕ ದೂರಿಗೆ ದಂಡ
ಈವರೆಗೆ ಏಳು ಬಾರಿ ಐಬಿಸಿ ತಿದ್ದುಪಡಿ

