ರಿಯಾದ್ : ಸೌದಿ ಅರೇಬಿಯಾ ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಹಕ್ಕು ಹೊಂದಿದೆ. ಇರಾನ್ ಮೇಲಿನ ನಂಬಿಕೆ ಸಂಪೂರ್ಣವಾಗಿ ಕಳೆದುಹೋಗಿದೆ ಎಂದು ಸೌದಿ ವಿದೇಶಾಂಗ ಸಚಿವರು ಗುರುವಾರ ಹೇಳಿದ್ದಾರೆ. ರಿಯಾದ್ ಅನ್ನು ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೆ ಈ ಹೇಳಿಕೆ ಹೊರಬಿದ್ದಿದೆ.
ಇದಕ್ಕೂ ಮೊದಲು ಇರಾನ್‌ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ, ಗಲ್ಫ್ ಪ್ರದೇಶದ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಹೇಳಿತ್ತು. ಖತರ್ ಮತ್ತು ಸೌದಿ ಅರೇಬಿಯಾವನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು.
ರಿಯಾದ್ ನಲ್ಲಿ ನಡೆದ ಉನ್ನತ ರಾಜತಾಂತ್ರಿಕ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್, ಇರಾನ್ ತನ್ನ ನೆರೆ ರಾಷ್ಟ್ರಗಳ ವಿರುದ್ಧ ಪೂರ್ವನಿಯೋಜಿತ ಶತ್ರುತ್ವದ ಕ್ರಮಗಳನ್ನು ನೇರವಾಗಿ ಹಾಗೂ ಪ್ರಾದೇಶಿಕ ಪ್ರತಿನಿಧಿ ಗುಂಪುಗಳ ಮೂಲಕ ತೆಗೆದುಕೊಂಡಿದೆ. "ಇರಾನ್‌ನ ಈ ಒತ್ತಡವು ರಾಜಕೀಯವಾಗಿ ಮತ್ತು ನೈತಿಕವಾಗಿ ಹಿನ್ನಡೆಯನ್ನುಂಟು ಮಾಡುತ್ತದೆ. ಅಗತ್ಯವೆಂದು ಕಂಡು ಬಂದರೆ ನಾವು ಸೇನಾ ಕ್ರಮ ಕೈಗೊಳ್ಳುವ ಹಕ್ಕನ್ನು ಖಂಡಿತವಾಗಿಯೂ ಕಾಯ್ದಿರಿಸಿದ್ದೇವೆ ಎಂದು ಹೇಳಿದರು.
ಮೂರು ವಾರಗಳಿಂದ ನಡೆಯುತ್ತಿರುವ ಯುದ್ಧದ ತೀವ್ರತೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಸಂಘರ್ಷವು ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯನ್ನುಂಟು ಮಾಡಿದೆ.

