ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರತ ಮತ್ತು ಜಪಾನ್ ನಡುವಿನ ಜಂಟಿ ಸಮರಾಭ್ಯಾಸ 'ಧರ್ಮ ಗಾರ್ಡಿಯನ್' 7ನೇ ಆವೃತ್ತಿ ಪ್ರಗತಿಯಲ್ಲಿದ್ದು, ಬುಧವಾರ ಈ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಎರಡೂ ಪಡೆಗಳ ಯೋಧರು ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದ್ದಾರೆ.
ಯೋಧರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮದಿಂದ ಹೋಳಿ ಆಚರಿಸುವ ಮೂಲಕ ಶುಭಾಶಯ ಕೋರಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಫೆಬ್ರುವರಿ 24ರಿಂದ ಆರಂಭವಾಗಿರುವ ಜಂಟಿ ಸಮರಾಭ್ಯಾಸ ಮಾರ್ಚ್ 9ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್ ಮತ್ತು ಭಾರತದ ರಕ್ಷಣಾ ಪಡೆಗಳ ನಡುವೆ ಪರಸ್ಪರ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ 'ಧರ್ಮ ಗಾರ್ಡಿಯನ್', 'ಮಲಬಾರ್', 'ಮಿಲಾನ್' ಕಾರ್ಯಾಚರಣೆಯ ಭಾಗವಾಗಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಮರಾಭ್ಯಾಸ ನಡೆಸಲಾಗುತ್ತದೆ.
ಭಾರತೀಯ ಸೇನೆ ಹಾಗೂ ಜಪಾನ್ ಸೇನೆ ನಡುವಿನ ರಕ್ಷಣಾ ಸಹಕಾರ ಮತ್ತು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ಉದ್ದೇಶ ಈ ಸಮರಾಭ್ಯಾಸದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

