ದುಬೈ: ಗಲ್ಫ್ ರಾಷ್ಟ್ರಗಳಲ್ಲಿನ ತೈಲ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ಸೇನೆ ಶನಿವಾರ ಕೂಡ ದಾಳಿ ಮುಂದುವರೆಸಿದೆ.
ಈ ಪರಿಣಾಮ ಗಲ್ಫ್ ರಾಷ್ಟ್ರಗಳಾದ ಯುಎಇ, ಕತಾರ್, ಕುವೈತ್ ಬಹರೇನ್ ದೇಶಗಳು ತೈಲ ಉತ್ಪಾದನಾ ಘಟಕಗಳನ್ನು ಶನಿವಾರ ಬಂದ್ ಮಾಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದರಿಂದ ಮುಂದಿನ ದಿನಗಳಲ್ಲಿ ತೈಲ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಬಹದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುಎಇಯಲ್ಲಿರುವ ಫುಜೈರಾದಲ್ಲಿ ತೈಲ ಉತ್ಪಾದನ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಬಹರೇನ್, ಕತಾರ್, ಕುವೈತ್‌ನಲ್ಲಿರುವ ಕೆಲವು ಘಟಕಗಳನ್ನು ಮುಚ್ಚಲಾಗಿದೆ. ಇರಾನ್ ಕಳೆದ ಎರಡು ದಿನಗಳಿಂದ ಡ್ರೋಣ್ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಆಡಳಿತದ ವಕ್ತಾರರು ತಿಳಿಸಿದ್ದಾರೆ.
ಅಮೆರಿಕದ ಸೇನಾ ನೆಲೆಗಳು ಇರುವ ದೇಶಗಳ ಮೇಲೆ ದಾಳಿ ಮುಂದುವರಿಸುವಂತೆ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಹೇಳಿದ್ದರು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ.
ಶುಕ್ರವಾರ ಮತ್ತು ಇಂದು (ಶನಿವಾರ) ದುಬೈ ಅಮೆರಿಕ ರಾಯಭಾರಿ ಕಚೇರಿಯ ಕಟ್ಟಡದ ಮೇಲೆ ಡ್ರೋಣ್ ದಾಳಿ ನಡೆಸಲಾಗಿದ್ದು ಕಟ್ಟಡಕ್ಕೆ ಹಾನಿಯಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ಅಗತ್ಯವಿದ್ದರೆ ಅಮೆರಿಕ ನೌಕಾಪಡೆಯು ಬೆಂಗಾವಲು ಒದಗಿಸಲಾಗುವುದು ಮತ್ತು ಮುಂದಿನ ವಾರ ಇರಾನ್ ಮೇಲೆ ಇನ್ನಷ್ಟು ದಾಳಿ ನಡೆಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಬಳಿ ಇದೀಗ ನೌಕಾಪಡೆ ಮತ್ತು ವಾಯುಪಡೆ ಇಲ್ಲ. ಅವರಲ್ಲಿದ್ದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಅವರ ನಾಯಕರನ್ನೂ ಹತ್ಯೆ ಮಾಡಲಾಗಿದೆ' ಎಂದು ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
https://truthsocial.com/@realDonaldTrump/posts/116224905719469197
ಇರಾನ್ ಹಾರಿಸಿದ ಸುಮಾರು 50 ಡ್ರೋನ್‌ಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ನಾಶಪಡಿಸಿದೆ. ಒಮಾನ್‌ನ ಸೊಹಾರ್‌ನಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಎರಡು ಡ್ರೋನ್‌ಗಳು ಅಪ್ಪಳಿಸಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಹರೇನ್‌ನಲ್ಲಿ ದಾಳಿಯ ಬಗ್ಗೆ ಎಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿದವು. ದುಬೈನಲ್ಲಿ ಕೈಗಾರಿಕಾ ಪ್ರದೇಶದಿಂದ ದಟ್ಟ ಹೊಗೆ ಎದ್ದಿದ್ದು, ಕ್ಷಿಪಣಿಯ ಅವಶೇಷ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಇಂಟರ್‌ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್‌ನಲ್ಲಿರುವ ಕಟ್ಟಡದ ಮೇಲೆ ಕ್ಷಿಪಣಿಯ ಅವಶೇಷ ಬಿದ್ದು ಹಾನಿ ಉಂಟಾಗಿದೆ.
ಇಸ್ರೇಲ್ ಹಾಗೂ ಅಮೆರಿಕವು ಇರಾನ್ ವಿರುದ್ಧ ಫೆಬ್ರುವರಿ 28ರಂದು ಜಂಟಿಯಾಗಿ ದಾಳಿ ನಡೆಸಿ, ಅದರ ಸರ್ವೋಚ್ಚ ನಾಯಕ 86 ವರ್ಷದ ಅಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ್ದವು. ಅದರ ಬೆನ್ನಲ್ಲೇ, ಇರಾನ್ ಪ್ರತಿದಾಳಿ ಆರಂಭಿಸಿತು. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತಲೆದೋರಿದೆ. ಅದು ಜಾಗತಿಕ ಇಂಧನ ಪೂರೈಕೆ ಮೇಲೆ ನೇರ ಪರಿಣಾಮ ಬೀರಿದೆ.

