ಚಂಡೀಗಢ: ಪಂಜಾಬ್‌ನ ಸಾಮಾಜಿಕ ಜಾಲತಾಣ 'ಇನ್‌ಫ್ಲುಯೆನ್ಸರ್' ನ್ಯಾನ್ಸಿ ಗ್ರೇವಲ್ ಅವರನ್ನು ಕೆನಡಾದಲ್ಲಿ ಹತ್ಯೆ ಮಾಡಲಾಗಿದೆ.
ತನಗೂ ಜೀವ ಬೆದರಿಕೆ ಬರುತ್ತಿದೆ ಎಂದು ಜಲಂಧರ್‌ನಲ್ಲಿರುವ ನ್ಯಾನ್ಸಿ ಅವರ ತಾಯಿ ಹೇಳಿದ್ದಾರೆ.
ಒಂಟಾರಿಯೊದ ಲಾಸಲ್ಲೆಯಲ್ಲಿ ನ್ಯಾನ್ಸಿ ಅವರನ್ನು ಮಾರ್ಚ್ 3ರಂದು ಕೊಲೆ ಮಾಡಲಾಗಿದೆ.
ನ್ಯಾನ್ಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಪಂಜಾಬ್‌ನಲ್ಲಿನ ಸಾಮಾಜಿಕ ಅಸಮಾನತೆ ಮತ್ತು ರಾಜಕೀಯ ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಖಾಲಿಸ್ತಾನಿಗಳು ಮತ್ತು ಖಾಲಿಸ್ತಾನಿಗಳ ನಾಯಕನ ಕಟುವಾಗಿ ಟೀಕಿಸುತ್ತಿದ್ದರು.
'ಮಾರ್ಚ್ 3ರ ರಾತ್ರಿ ಸುಮಾರು 9:30ರ ಸುಮಾರಿಗೆ 45 ವರ್ಷದ ಮಹಿಳೆಯೊಬ್ಬರಿಗೆ ಚಾಕು ಇರಿದಿರುವುದಾಗಿ ಮಾಹಿತಿ ದೊರೆತಿದೆ. ತೀವ್ರ ಗಾಯಗೊಂಡಿದ್ದ ನ್ಯಾನ್ಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ' ಎಂದು ಲಾಸಲ್ಲೆ ಪೊಲೀಸರು ತಿಳಿಸಿದ್ದಾರೆ.

