ವಿಶಾಖಪಟ್ಟಣದಲ್ಲಿ ನಡೆದ 'ಮಿಲನ್' ನೌಕಾ ಕವಾಯತು ಹಾಗೂ ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಭಾಗವಹಿಸಿ ಇರಾನ್ ಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ಟಾರ್ಪಿಡೊ ದಾಳಿಗೆ ಒಳಗಾದಿರಬಹುದೆಂದು ಹೇಳಲಾಗುತ್ತಿರುವ 'ಐಆರ್‌ಐಎಸ್ ದೇನಾ'ಯಿಂದ ತುರ್ತು ಕರೆ ಬಂದಿತ್ತು.
ನೌಕಾಪಡೆಯ ಹೇಳಿಕೆಯ ಪ್ರಕಾರ, ಮಾರ್ಚ್ 4ರ ಮುಂಜಾನೆ ಕೊಲಂಬೊದಲ್ಲಿರುವ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) 'ಐಆರ್‌ಐಎಸ್ ದೇನಾ'ಯಿಂದ ಸಂಕಷ್ಟದ ಸಂದೇಶ ಬಂದಿದೆ. ಈ ಯುದ್ಧನೌಕೆ ಶ್ರೀಲಂಕಾದ ವ್ಯಾಪ್ತಿಯಲ್ಲಿರುವ ಶೋಧ-ರಕ್ಷಣಾ ಪ್ರದೇಶದ ಗ್ಯಾಲೆ ನಗರದಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ಪಶ್ಚಿಮಕ್ಕೆ ಕಾರ್ಯನಿರ್ವಹಿಸುತ್ತಿತ್ತು.
ಕರೆ ಬಂದ ತಕ್ಷಣ ಭಾರತೀಯ ನೌಕಾಪಡೆ ಶೋಧ-ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಶ್ರೀಲಂಕಾ ಈಗಾಗಲೇ ಆರಂಭಿಸಿದ್ದ ಶೋಧ ಕಾರ್ಯವನ್ನು ಬಲಪಡಿಸಲು ಬುಧವಾರ ಬೆಳಿಗ್ಗೆ 10 ಗಂಟೆಗೆ ದೀರ್ಘ ಶ್ರೇಣಿಯ ಕಡಲ ಗಸ್ತು ವಿಮಾನ 'ಪಿ-8ಐ' ಅನ್ನು ನಿಯೋಜಿಸಲಾಯಿತು.
ಏರ್‌ಡ್ರಾಪ್ ಮಾಡಬಹುದಾದ ಲೈಫ್ ರಾಫ್ಟ್‌ಗಳನ್ನು ಹೊಂದಿರುವ ಮತ್ತೊಂದು ವಿಮಾನವನ್ನು ಕೂಡ ತಕ್ಷಣದ ನಿಯೋಜನೆಗಾಗಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಇದಲ್ಲದೆ, ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಐಎನ್‌ಎಸ್ ತರಂಗಿಣಿ' ಹಡಗನ್ನು ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ನಿಯೋಜಿಸಲಾಗಿದ್ದು, ಅದು ಬುಧವಾರ ಸಂಜೆ 4 ಗಂಟೆಗೆ ಶೋಧ ಪ್ರದೇಶವನ್ನು ತಲುಪಿದೆ.
ಹೆಚ್ಚುವರಿಯಾಗಿ, 'ಐಎನ್‌ಎಸ್ ಇಕ್ಷಾಕ್' ಹಡಗು ಕೊಚ್ಚಿಯಿಂದ ಹೊರಟಿದ್ದು, ಹಡಗು ದುರಂತದಲ್ಲಿ ಕಾಣೆಯಾಗಿರುವ ಸಿಬ್ಬಂದಿಯನ್ನು ಹುಡುಕುವ ಮಾನವೀಯ ಕಾರ್ಯಾಚರಣೆಗೆ ನೆರವಾಗಲು ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನೌಕಾಪಡೆ ತಿಳಿಸಿದೆ.
ಶೋಧ-ರಕ್ಷಣಾ ಕಾರ್ಯಾಚರಣೆಗಳಲ್ಲಿ ಶ್ರೀಲಂಕಾ ನೌಕಾಪಡೆ ಹಾಗೂ ಇತರ ಸಂಸ್ಥೆಗಳೊಂದಿಗೆ ಸಮನ್ವಯ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

