ತಿರುವನಂತಪುರಂ: ಬಿಜೆಪಿ ರಾಜ್ಯ ಘಟಕದ ಮುದ್ರೆ ಹೊಂದಿರುವ ಚುನಾವಣಾ ಆಯೋಗದ ಪತ್ರದ ಕುರಿತ ವಿವಾದಕ್ಕೆ ಸಂಬಂಧಿಸಿ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಕೇರಳ ಮುಖ್ಯ ಚುನಾವಣಾಧಿಕಾರಿ ಮಂಗಳವಾರ ಹೇಳಿದ್ದಾರೆ.
ಕಡತವನ್ನು ನಿರ್ವಹಿಸಿದ ಉಪ ವಿಭಾಗೀಯ ಅಧಿಕಾರಿಯನ್ನು ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಬಿಜೆಪಿಯ ಕೇರಳ ಘಟಕದ ಮುದ್ರೆಯನ್ನು ಹೊಂದಿರದ ಮೂಲ ಸಂವಹನದ ಲಿಂಕ್ ಅನ್ನು ಕೂಡ ರಾಜಕೀಯ ಪಕ್ಷಗಳಿಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರದ ಕುರಿತ ನಿಯಮಗಳನ್ನು ವಿವರಿಸಲು ದೇಶಾದ್ಯಂತದ ರಾಜಕೀಯ ಪಕ್ಷಗಳಿಗೆ ಕಳುಹಿಸಲಾದ 2019 ಮಾರ್ಚ್ 19 ದಿನಾಂಕದ ಪತ್ರದಲ್ಲಿ ಬಿಜೆಪಿಯ ಮುದ್ರೆ ಇದೆ. ಪತ್ರವನ್ನು ಮಾರ್ಚ್ 21ರಂದು ಈ ಮೇಲ್ ಜೊತೆ ಕಳುಹಿಸಲಾಗಿದೆ.
ಈ ಲೋಪ ಬೆಳಕಿಗೆ ಬಂದ ಬಳಿಕ ಚುನಾವಣಾ ಆಯೋಗ, ಸಿಬ್ಬಂದಿ ತಪ್ಪಿನಿಂದಾಗಿ ಪತ್ರ ಬಿಜೆಪಿಯ ಮುದ್ರೆಯನ್ನು ಹೊಂದಿತ್ತು ಎಂದು ಹೇಳಿದೆ.
ಈ ಲೋಪ ಪತ್ತೆಯಾದ ಕೂಡಲೇ ಮುಖ್ಯ ಚುನಾವಣಾಧಿಕಾರಿ ಕಚೇರಿ ತಪ್ಪನ್ನು ಒಪ್ಪಿಕೊಂಡಿದೆ ಎಂದು ಕೇರಳದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಅನಂತರ ಮಾರ್ಚ್ 21ರಂದು ಉಪ ಮುಖ್ಯ ಚುನಾವಣಾಧಿಕಾರಿ ತಪ್ಪಾದ ಪತ್ರವನ್ನು ಹಿಂಪಡೆಯುವ ಔಪಚಾರಿಕ ಪತ್ರವನ್ನು ಹೊರಡಿಸಿದ್ದಾರೆ.

