ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ನಾಮಪತ್ರಕ್ಕೆ ಸಂಬಂಧಿಸಿದಂತೆ ರಾಜಕೀಯ ವಿವಾದ ಭುಗಿಲೆದ್ದಿದೆ.
ರಾಜೀವ್ ಚಂದ್ರಶೇಖರ್ ಅವರು ನೇಮಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಅಲ್ಲದೆ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು ₹93 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ರಾಜೀವ್ ಚಂದ್ರಶೇಖರ್, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ವಿವರವನ್ನು ಮರೆಮಾಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
₹200 ಕೋಟಿ ಆಸ್ತಿ?
ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿರುವ ಸುಮಾರು ₹200 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿಲ್ಲ. ಈ ಸಂಬಂಧ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದರಿಂದಾಗಿ ನಾಮಪತ್ರ ಅಸಿಂಧುಗೊಳ್ಳುವುದೇ ಎಂಬ ಪ್ರಶ್ನೆ ಮೂಡಿದೆ.
ಕೋರ್ಟ್ ಮೊರೆ ಹೋಗಿ: ರಾಜೀವ್ ಸವಾಲು
'ನನ್ನ ವಿರುದ್ಧದ ಆರೋಪಗಳು ಆಧಾರರಹಿತ. ಇದನ್ನು ಸಾಬೀತುಪಡಿಸಲು ಕಾಂಗ್ರೆಸ್‌ಗೆ 'ಬೆನ್ನು ಮೂಳೆ' ಇದ್ದರೆ ನ್ಯಾಯಾಲಯದ ಮೊರೆ ಹೋಗಲಿ' ಎಂದು ರಾಜೀವ್ ಚಂದ್ರಶೇಖರ್ ಸವಾಲು ಹಾಕಿದ್ದಾರೆ. 'ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸುಳ್ಳುಗಳನ್ನು ಆಶ್ರಯಿಸುತ್ತಿದೆ. ರಾಜ್ಯ ಸಚಿವ ಶಿವನ್‌ಕುಟ್ಟಿ ನನ್ನ ವಿರುದ್ಧ ಪದೇ ಪದೇ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇದು ಹೊಸ ಆರೋಪವಲ್ಲ. ಪ್ರತಿ ಚುನಾವಣೆಯ ಸಮಯದಲ್ಲಿಯೂ ಅವರು ಇಂತಹ ಆರೋಪಗಳನ್ನು ಮಾಡುತ್ತಾರೆ. ಜನರು ವಿವಾದಗಳನ್ನು ಬಯಸುವುದಿಲ್ಲ. ಅವರಿಗೆ ಅಭಿವೃದ್ಧಿ ಮುಖ್ಯ' ಎಂದು ಹೇಳಿದ್ದಾರೆ.
'ಕಳೆದ 15 ವರ್ಷಗಳಿಂದ ಆರೋಪಗಳನ್ನು ಹೊರಿಸಲಾಗುತ್ತಿದೆ. ಆದರೆ ನನ್ನ ವಿರುದ್ಧದ ಪ್ರತಿಯೊಂದು ದಾಳಿಯನ್ನು ದೃಢನಿಶ್ಚಯದಿಂದ ಎದುರಿಸಿದ್ದೇನೆ. ನನ್ನ ಬದುಕಿನಲ್ಲಿ ಎಲ್ಲವನ್ನೂ ಪಾರದರ್ಶಕವಾಗಿ ಮಾಡಿದ್ದೇನೆ' ಎಂದಿದ್ದಾರೆ.
'ಇದು ಸುಳ್ಳು ಹಾಗೂ ಆಧಾರರಹಿತ ಆರೋಪವಾಗಿದ್ದು, ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಸಾಬೀತು ಮಾಡಲಿ' ಎಂದು ಸವಾಲು ಹಾಕಿದ್ದಾರೆ.
ರಾಜೀವ್ ಸಲ್ಲಿಸಿದ ಅಫಿಡವಿಟ್‌ನಲ್ಲಿ ಏನಿತ್ತು?
ರಾಜೀವ್ ಅವರು ₹107 ಕೋಟಿಗೂ ಅಧಿಕ ಸಾಲ ಹೊಂದಿದ್ದು, ಇವರ ಪತ್ನಿ ಹೆಸರಿನಲ್ಲಿ ₹1.62 ಕೋಟಿ ಸಾಲ ಇದೆ. 2024-25ರ ಆದಾಯ ತೆರಿಗೆ ಪ್ರಕಾರ ರಾಜೀವ್ ಅವರ ಆದಾಯವು ₹92.91 ಕೋಟಿ ಇದ್ದು, ಪತ್ನಿಯ ಆದಾಯವು ₹60.50 ಕೋಟಿ ಇದೆ.
ಒಟ್ಟು ಚರಾಸ್ತಿಯ ಮೌಲ್ಯ ₹78.81 ಕೋಟಿ ಇದ್ದರೆ, ಸ್ತಿರಾಸ್ತಿಯ ಮೌಲ್ಯವು 15.07 ಕೋಟಿಗೂ ಅಧಿಕವಿದೆ. ರಾಜೀವ್ ಅವರು ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿ ರಾಜೀವ್ ಅವರು ಎರಡು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ನೇಮಂ: ಯಾರೆಲ್ಲ ಮುಖಾಮುಖಿ?
ನೇಮಂ ಕ್ಷೇತ್ರದಲ್ಲಿ ಸಿಪಿಐ(ಎಂ) ನಾಯಕ, ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎಸ್. ಶಬರೀನಾಥನ್ ವಿರುದ್ಧ ರಾಜೀವ್ ಸ್ಪರ್ಧಿಸುತ್ತಿದ್ದಾರೆ.
'ರಾಜೀವ್ ಅವರು ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಕುರಿತು ತೆರಿಗೆ ದಾಖಲೆಗಳಲ್ಲಿ ಬಹಿರಂಗವಾಗಿದೆ. ಆದರೂ ಆ ಆಸ್ತಿಯನ್ನು ಅಫಿಡವಿಟ್‌ನಲ್ಲಿ ಘೋಷಿಸಿಲ್ಲ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ' ಎಂದು ನೇಮಂ ಕ್ಷೇತ್ರದ ಸಿಪಿಎಂ ಅಭ್ಯರ್ಥಿ, ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಆರೋಪಿಸಿದ್ದಾರೆ.
'ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಮನೆಯನ್ನು ಅಭ್ಯರ್ಥಿಯ ನಿವಾಸವೆಂದು ಘೋಷಿಸಲಾಗಿತ್ತು. ಈಗ ಆ ಆಸ್ತಿ ವಿವರಗಳನ್ನು ಮರೆಮಾಚಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ' ಎಂದಿದ್ದಾರೆ.
'ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಫಿಡವಿಟ್ ಮತ್ತು ಕರ್ನಾಟಕ ಸರ್ಕಾರದ ಆಸ್ತಿ ತೆರಿಗೆ ದಾಖಲೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಣಕ್ಕಾಡ್ ಸುರೇಶ್ ಹೇಳಿದ್ದಾರೆ.
'ರಾಜೀವ್ ಅವರು ತಮ್ಮ ₹200 ಕೋಟಿ ಮೌಲ್ಯದ ಆಸ್ತಿಯನ್ನು ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ. ನಾಮಪತ್ರ ಪರಿಶೀಲನೆ ವೇಳೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಇದೆ' ಎಂದು ನೇಮಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ ತಿಳಿಸಿದ್ದಾರೆ.

