ನವದೆಹಲಿ: 'ಮಹಿಳೆಯರು ಶಕ್ತಿಶಾಲಿಗಳು, ನಾವು ಯಾರಿಗಿಂತಲೂ ಕಡಿಮೆ ಇಲ್ಲ. ಅವಕಾಶ ಮತ್ತು ಬೆಂಬಲ ದೊರೆತರೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸಬಹುದು' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಪಾದಿಸಿದರು.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ದೇಶದ ಮಹಿಳೆಯರಿಗೆ ಶುಭಾಶಯ ಕೋರಿ ಮಾತನಾಡಿದ ಅವರು,'ಈ ಸಂದರ್ಭದಲ್ಲಿ ಕೇವಲ ಮಹಿಳೆಯರ ಸಾಧನೆಗಳನ್ನು ಗೌರವಿಸುವುದಲ್ಲದೇ, ಅವರ ಸಬಲೀಕರಣಕ್ಕೆ ರಾಷ್ಟ್ರವೇ ಬದ್ಧವಾಗಿರುತ್ತದೆ ಎಂಬುದನ್ನು ಪುನರುಚ್ಛರಿಸಬೇಕಿದೆ' ಎಂದು ಹೇಳಿದರು.
ಮಹಿಳೆಯರು ಪ್ರಸ್ತುತ ಶಿಕ್ಷಣ, ಆಡಳಿತ, ನ್ಯಾಯಾಂಗ, ಸೇನೆ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಕಲೆ, ಉದ್ಯಮ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಬೆಳಗುತ್ತಿದ್ದಾರ. ಗ್ರಾಮೀಣ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮಾತ್ರವಲ್ಲ, ಉದ್ಯೋಗ, ನವೋದ್ಯಮ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲೂ ಮುಂಚೂಣಿ ನಾಯಕಿಯರಾಗಿ ಹೊರಹೊಮ್ಮುತ್ತಿದ್ದಾರೆ' ಎಂದು ಶ್ಲಾಘಿಸಿದರು.

