ಟೆಹರಾನ್: ಇರಾನ್ ನ ಎರಡು ವಿಶ್ವವಿದ್ಯಾನಿಲಯಗಳು ಇಸ್ರೇಲ್-ಅಮೆರಿಕ ಜಂಟಿ ದಾಳಿಯಲ್ಲಿ ಧ್ವಂಸಗೊಂಡಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇರಾನ್ ನ ರೆವಲ್ಯೂಶನರಿ ಗಾರ್ಡ್ IRGC ಎಚ್ಚರಿಕೆ ನೀಡಿದೆ.
"ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯಗಳು ಪ್ರತಿದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ, ಟೆಹರಾನ್ ಕಾಲಮಾನದ ಪ್ರಕಾರ ಸೋಮವಾರ ಮಧ್ಯಾಹ್ನ 12 ಗಂಟೆಯೊಳಗೆ ಇರಾನಿಯನ್ ವಿಶ್ವವಿದ್ಯಾನಿಲಯಗಳ ಮೇಲೆ ನಡೆದ ದಾಳಿಯನ್ನು ಅಧಿಕೃತವಾಗಿ ಖಂಡಿಸಬೇಕು" ಎಂದು ರೆವಲ್ಯೂಶನರಿ ಗಾರ್ಡ್ ಹೇಳಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ಆರಂಭಗೊಂಡು ಒಂದು ತಿಂಗಳು ಕಳೆದರೂ ಸಂಘರ್ಷ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಟೆಹರಾನ್ ನಗರದ ವಿವಿಧ ಭಾಗಗಳಲ್ಲಿ ಇಸ್ರೇಲ್ ದಾಳಿ ಮುಂದುವರಿದಿದ್ದು, ಯೆಮನ್ ನಲ್ಲಿರುವ ಇರಾನ್ ಪರ ಹೌತಿಗಳು ಇಸ್ರೇಲ್ ವಿರುದ್ಧ 24 ಗಂಟೆಗಳಲ್ಲಿ ಎರಡನೇ ಬಾರಿಗೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದಾರೆ.
ಮುಂದಿನ ದಿನಗಳಲ್ಲೂ ಸೈನಿಕ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಹೌತಿ ಸಂಘಟನೆಯ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂಘರ್ಷದಲ್ಲಿ ಹೌತಿಗಳ ಸಕ್ರಿಯ ಭಾಗವಹಿಸುವಿಕೆ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಯೆಮನ್ ನಾಚೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಹೌತಿಗಳು ಅರೇಬಿಯನ್ ಪರ್ಯಾಯದ್ವೀಪ ಹಾಗೂ ಕೆಂಪು ಸಮುದ್ರ ಪ್ರದೇಶದ ಶಿಪ್ಪಿಂಗ್ ಲೇನ್ ಗಳಿಗೆ ಅಪಾಯ ಉಂಟುಮಾಡುತ್ತಿರುವ ಹಿನ್ನೆಲೆ, ಇಡೀ ಪ್ರದೇಶದಲ್ಲಿ ಆತಂಕ ವೃದ್ಧಿಯಾಗಿದೆ. 2023ರ ಅಕ್ಟೋಬರ್ 7ರ ದಾಳಿ ಬಳಿಕ ಗಾಝಾ ಯುದ್ಧದಲ್ಲಿ ಹೌತಿಗಳು ಹಮಾಸ್ ಸಂಘಟನೆಗೆ ಬೆಂಬಲ ನೀಡಿದ್ದರು.
ಇದೇ ವೇಳೆ, ಇರಾಕ್‌ನ ಉತ್ತರ ಭಾಗದ ಮೊಸುಲ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಲೆಬನಾನ್ ನ ವಿವಿಧೆಡೆ ಶನಿವಾರ ನಡೆದ ಐದು ಪ್ರತ್ಯೇಕ ದಾಳಿಗಳಲ್ಲಿ ಒಂಭತ್ತು ಮಂದಿ ಅರೆವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

