ನವದೆಹಲಿ: 'ನಕ್ಸಲರ ತಾಣವಾಗಿದ್ದ ಛತ್ತೀಸಗಢದ ಬಸ್ತರ್ ಪ್ರದೇಶವೂ ಸೇರಿದಂತೆ ಇಡೀ ಭಾರತ ಈಗ ಬಹುತೇಕ ನಕ್ಸಲ್ ಮುಕ್ತವಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಲೋಕಸಭೆಯಲ್ಲಿ ಘೋಷಿಸಿದರು.
'2026ರ ಮಾರ್ಚ್ 31ಕ್ಕೆ ಭಾರತವನ್ನು ನಕ್ಸಲರಿಂದ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ' ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಈ ಗುರಿಯನ್ನು ಸಂಪೂರ್ಣವಾಗಿ ಸಾಧಿಸಿದ ಬಳಿಕ ದೇಶದೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಅಮಿತ್ ಶಾ ಲೋಕಸಭೆಯಲ್ಲಿ ಪ್ರಕಟಿಸಿದರು.
'ಎಡಪಂಥೀಯ ತೀವ್ರವಾದಿಂದ ಭಾರತವನ್ನು ಮುಕ್ತಗೊಳಿಸುವ ಯತ್ನಗಳು' ವಿಷಯದ ಕುರಿತು ಲೋಕಸಭೆಯಲ್ಲಿ ಇಡೀ ದಿನ ಚರ್ಚೆ ನಡೆಯಿತು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು. 'ನಕ್ಸಲ್‌ವಾದದ ಪರಿಣಾಮಗಳ ಗಂಭೀರತೆ ತಿಳಿದಿದ್ದರೂ ಅದನ್ನು ಅಂತ್ಯಗೊಳಿಸುವಲ್ಲಿ ಕಾಂಗ್ರೆಸ್ ಯಾವುದೇ ಕೆಲಸ ಮಾಡಿಲ್ಲ' ಎಂದು ಶಾ ಆರೋಪಿಸಿದರು.
'ಬಸ್ತರ್‌ನಿಂದ ನಕ್ಸಲ್‌ವಾದವು ಹೆಚ್ಚುಕಮ್ಮಿ ನಾಶವಾಗಿದೆ. ಇಲ್ಲಿನ ಪ್ರತಿಯೊಂದು ಹಳ್ಳಿಗಳಲ್ಲಿಯೂ ಶಾಲಾ ಕಟ್ಟಡವನ್ನು ನಿರ್ಮಿಸಲೂ, ಪಡಿತರ ಅಂಗಡಿಗಳನ್ನು ಆರಂಭಿಸಲೂ ಅಭಿಯಾನ ಕೈಗೊಳ್ಳಲಾಗಿದೆ. ಕೆಂಪು ಉಗ್ರವಾದದ ಕರಿನೆರಳಿನಿಂದ ಈ ಪ್ರದೇಶವು ಮುಕ್ತವಾಗಿ ಅಭಿವೃದ್ಧಿಯ ಬೆಳಕು ಕಾಣುತ್ತಿದೆ' ಎಂದರು.
'ಕೆಂಪು ಕಾರಿಡಾರ್‌ಗಳಾಗಿ 12 ರಾಜ್ಯಗಳು ಬದಲಾಗಿದ್ದವು. ಹಲವು ವರ್ಷಗಳಿಂದ 12 ಕೋಟಿ ಜನರು ಬಡತನದಲ್ಲಿದ್ದಾರೆ. 5,000 ಭದ್ರತಾ ಸಿಬ್ಬಂದಿ ಸೇರಿ 20 ಸಾವಿರ ಮಂದಿ ನಕ್ಸಲರಿಂದ ಹತ್ಯೆಯಾಗಿದ್ದಾರೆ. 75 ವರ್ಷಗಳಲ್ಲಿ 60 ವರ್ಷ ನೀವೇ (ಕಾಂಗ್ರೆಸ್) ಆಡಳಿತ ನಡೆಸಿದ್ದೀರಿ. ಬುಡಕಟ್ಟು ಜನರು ಯಾಕೆ ಅಭಿವೃದ್ಧಿ ಕಾಣಲಿಲ್ಲ? ಪ್ರಧಾನಿ ಮೋದಿ ಅವರು ಈಗ ಅವರ ಅಭಿವೃದ್ಧಿ ಮಾಡುತ್ತಿದ್ದಾರೆ' ಎಂದರು.
'ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಸಮಸ್ಯೆಗಳಿಗಿಂತ ನಕ್ಸಲ್‌ವಾದವೇ ದೊಡ್ಡ ಸವಾಲು' ಎಂದು ದೇಶದೆದುರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಒಪ್ಪಿಕೊಂಡಿದ್ದರು. ಆದರೆ, ಕಾಂಗ್ರೆಸ್ ಮಾತ್ರ ಏನನ್ನೂ ಮಾಡಲಿಲ್ಲ. ಬುಡಕಟ್ಟು ಜನರಿಗೆ ಮನೆ ಕೊಡಲಿಲ್ಲ, ನೀರು ಕೊಡಲಿಲ್ಲ, ಶಾಲೆ ಕಟ್ಟಿಸಿಕೊಡಲಿಲ್ಲ, ಬ್ಯಾಂಕ್ ಸೌಲಭ್ಯ ನೀಡಲಿಲ್ಲ' ಎಂದು ಅಮಿತ್ ಶಾ ಕಾಂಗ್ರೆಸ್ ಅನ್ನು ದೂರಿದರು.
'ನಕ್ಸಲರ ವಿರುದ್ಧದ ಕಾರ್ಯಾಚರಣೆಯ ಯಶಸ್ಸು, ಕೋಬ್ರಾ ಪಡೆ ಮತ್ತು ಸಿಆರ್‌ಪಿಎಫ್ ಸೇರಿ ಎಲ್ಲ ಸಿಎಪಿಎಫ್ ಸಿಬ್ಬಂದಿ, ಭದ್ರತಾ ಸಂಸ್ಥೆಗಳು, ಛತ್ತೀಸಗಢ ಪೊಲೀಸರು, ಡಿಆರ್‌ಜಿ ಸಿಬ್ಬಂದಿ ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಸಲ್ಲಬೇಕು' ಎಂದರು.
- ಅಮಿತ್ ಶಾ, ಕೇಂದ್ರ ಗೃಹ ಸಚಿವಪ್ರಧಾನಿ ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದರೆ ಅದು ನಕ್ಸಲ್ ಮುಕ್ತ ಭಾರತ. ಯಾವ ಸಂಶೋಧಕ ಕೂಡ ಇದನ್ನು ಒಪ್ಪಿಕೊಳ್ಳಲೇಬೇಕು - ಸಂಬಿತ್ ಪಾತ್ರ, ಬಿಜೆಪಿ ಸಂಸದಕಾಂಗ್ರೆಸ್‌ಗೆ ಹತ್ತಿರವಾಗಿದ್ದ ಕೆಲವು ಬುದ್ಧಿಜೀವಿಗಳು ನಕ್ಸಲರನ್ನು 'ಬುಂದೂಕುಗಳಿಲ್ಲದ ಗಾಂಧಿವಾದಿಗಳು' ಎಂದು ಕರೆದಿದ್ದರು. ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ನಗರ ನಕ್ಸಲರಿದ್ದರು.- ಮೊಹುವಾ ಮೊಯಿತ್ರಾ, ಟಿಎಂಸಿ ಸಂಸದೆಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಭಾರತದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಎಲ್‌ಜಿಪಿ ಮತ್ತು ತೈಲದ ಕೊರತೆ ಇದೆ. ಇಂಥಾ ಹೊತ್ತಿನಲ್ಲಿ ನಾವು ನಕ್ಸಲ್‌ವಾದದ ಕುರಿತು ಯಾಕೆ ಮಾತನಾಡುತ್ತಿದ್ದೇವೆ
'ಕಾಂಗ್ರೆಸ್ ರಾಜಿ ಮಾಡಿಕೊಂಡಿತ್ತು'
ಹಿಂದಿನ ಸರ್ಕಾರಗಳು ಸೂಕ್ತ ಸಮಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿಯು ಬೇರೆಯದೇ ಆಗಿರುತ್ತಿತ್ತು. ಹೀಗೆ ಆಗಲಿಲ್ಲ ಯಾಕೆಂದರೆ ಹಿಂದಿನ ಸರ್ಕಾರಗಳು 'ಮಜ್ಬೂತ್' (ಶಕ್ತಿಶಾಲಿ) ಆಗಿರಲಿಲ್ಲ; 'ಮಜ್ಬೂರ್' (ಅಸಹಾಯಕ) ಆಗಿದ್ದವು. ದೇಶವನ್ನು ಒಳಗಿಂದಲೇ ಶಕ್ತಿಹೀನ ಮಾಡುವುದರ ಕಡೆಗೇ ನಿಮ್ಮ (ಕಾಂಗ್ರೆಸ್) ಯತ್ನ ಇತ್ತು. ವಿದೇಶಿ ಪಿತೂರಿ ಕೆಲಸ ಮಾಡುತ್ತಿದ್ದವು ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ರಾಜಿ ಮಾಡಿಕೊಂಡಿತ್ತು ಶ್ರೀಕಾಂತ್ ಶಿಂದೆ ಶಿವಸೇನಾ ಸಂಸದ
'ನಕ್ಸಲ್‌ವಾದದ ಸಂತ್ರಸ್ತ ಪಕ್ಷ ನಮ್ಮದು'
ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಯಕ್ಷನ್ (ಕೋಬ್ರಾ) ಅನ್ನು ರೂಪಿಸಿದ್ದು ಕಾಂಗ್ರೆಸ್. ಜೊತೆಗೆ 'ಆಪರೇಷನ್ ಗ್ರೀನ್ ಹಂಟ್' ಅನ್ನೂ ಆರಂಭಿಸಿದ್ದೆವು. ನಕ್ಸಲ್‌ವಾದದ ಕಾರಣಕ್ಕೆ ಛತ್ತೀಸಗಢದಲ್ಲಿ ಪಕ್ಷವು ಹಲವು ಹಿರಿಯ ನಾಯಕರನ್ನು ಕಳೆದುಕೊಂಡಿದೆ. ನಕ್ಸಲ್‌ವಾದದ ಸಂತ್ರಸ್ತ ಪಕ್ಷ ನಮ್ಮದು. ಅಭಿವೃದ್ಧಿ ಮತ್ತು ಭದ್ರತೆ ಎರಡಕ್ಕೂ ಕಾಂಗ್ರೆಸ್ ಸಮಾನವಾದ ಮಹತ್ವ ನೀಡಿತ್ತು. ನಕ್ಸಲ್‌ವಾದವನ್ನು ಗುಂಡುಗಳಿಂದ ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ಪಕ್ಷದ ನಿಲುವು. ಸಪ್ತಗಿರಿ ಉಲಕಾ ಕಾಂಗ್ರೆಸ್ ಸಂಸದ

