ದುಬೈ/ ಟೆಹರಾನ್: ಇರಾನ್ ಸೇನೆಯು ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿ ಮಂಗಳವಾರವೂ ದೊಡ್ಡ ಪ್ರಮಾಣದಲ್ಲಿ ಪ್ರತಿದಾಳಿ ನಡೆಸಿದೆ.
ಮತ್ತೊಂದೆಡೆ, ಅಮೆರಿಕ-ಇಸ್ರೇಲ್ ಸೇನೆಗಳು ಇರಾನ್ ಮೇಲೆ ನಿರಂತರ ದಾಳಿ ನಡೆಸಿರುವುದರಿಂದ ಪಶ್ಚಿಮ ಏಷ್ಯಾ ಬಿಕ್ಕಟ್ಟು ದಿನದಿಂದ ದಿನಕ್ಕೆ ವಿಷಮಗೊಳ್ಳುತ್ತಿದೆ.
ಪಶ್ಚಿಮ ಏಷ್ಯಾದ ಆಚೆಗೂ ವಿಸ್ತರಿಸಿರುವ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಇರಾನ್ ನಡೆಸಿದ ದಾಳಿಯಿಂದಾಗಿ ಬಹರೇನ್ ಮತ್ತು ದುಬೈನಲ್ಲಿ ಮಂಗಳವಾರ ಕ್ಷಿಪಣಿ ದಾಳಿಯ ಎಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿದವು. ತನ್ನ ಪೂರ್ವ ಭಾಗದಲ್ಲಿರುವ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿ ಇರಾನ್ ಹಾರಿಸಿದ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾ ಹೇಳಿದೆ.
ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಗುರಿಯಾಗಿಸಿ ನಡೆಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಕುವೈತ್ ಭದ್ರತಾ ಪಡೆಗಳು ತಿಳಿಸಿವೆ.
ಅಬುಧಾಬಿಯ ರುವೈಸ್ ತೈಲ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಜೆರುಸಲೇಂನಲ್ಲೂ ಸೈರನ್‌ಗಳು ಮೊಳಗಿದವು. ಟೆಲ್ ಅವೀವ್‌ನಲ್ಲಿ ಸ್ಫೋಟದ ಸದ್ದುಗಳು ಕೇಳಿಸಿವೆ. ಹಲವು ಕ್ಷಿಪಣಿಗಳನ್ನು ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆಯು ನಾಶಪಡಿಸಿದೆ.
ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಹಾರಿಸುವುದರ ಜತೆಗೆ, ಇಂಧನ ಮೂಲಸೌಕರ್ಯಗಳನ್ನೂ ಇರಾನ್ ತನ್ನ ಗುರಿಯಾಗಿಸಿಕೊಂಡಿದೆ. ಹೊರ್ಮುಜ್ ಜಲಸಂಧಿ ಮೇಲಿನ ಹಿಡಿತ ಬಿಗಿಗೊಳಿಸಿದೆ.
'ಮುಂದಿನ ಸೂಚನೆ ಬರುವವರೆಗೂ ಈ ಪ್ರದೇಶದಿಂದ ಶತ್ರು ರಾಷ್ಟ್ರಗಳು ಮತ್ತು ಅವರ ಪಾಲುದಾರರಿಗೆ ಒಂದೇ ಒಂದು ಲೀಟರ್ ತೈಲವನ್ನೂ ರಫ್ತು ಮಾಡಲು ಅನುಮತಿಸುವುದಿಲ್ಲ' ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್‌ಜಿಸಿ) ಘೋಷಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಮೇಲಿನ ದಾಳಿ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. 'ಇರಾನ್ ಜನರನ್ನು ನಿರಂಕುಶ ಆಡಳಿತದ ಬಿಗಿ ಹಿಡಿತದಿಂದ ಬಿಡುಗಡೆ ಮಾಡುವುದು ನಮ್ಮ ಗುರಿ ಆಗಿದೆ. ಆದರೆ ಅಂತಿಮವಾಗಿ ಇದು ಅವರ (ಇರಾನ್ ಜನರ) ಮೇಲೆ ಅವಲಂಬಿತವಾಗಿದೆ' ಎಂದಿದ್ದಾರೆ.
'ಇದುವರೆಗಿನ ದಾಳಿಯಲ್ಲಿ ಅಲ್ಲಿನ ಆಡಳಿತಕ್ಕೆ ದೊಡ್ಡ ಪ್ರಹಾರ ನೀಡಿದ್ದೇವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಹೇಳಿದ್ದಾರೆ.
ಇಸ್ರೇಲ್-ಅಮೆರಿಕ ಸೇನೆಗಳು ನಡೆಸಿದ ದಾಳಿಯಲ್ಲಿ ದಕ್ಷಿಣ ಇರಾನ್‌ನ ಕೆರ್ಮನ್ ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿ ನಿಲ್ಲಿಸಿದ್ದ ಕೆಲವು ವಿಮಾನಗಳೂ ನಾಶವಾಗಿವೆ.
'ಇರಾನ್‌ನ ಆರು ಸೇನಾ ನೆಲೆಗಳನ್ನು ಗುರಿಯಾಗಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ' ಎಂದು ಇಸ್ರೇಲ್ ಸೇನೆ ಸೋಮವಾರ ಹೇಳಿದೆ. ಟೆಹರಾನ್‌ನ ಮೆಹರಾಬಾದ್ ವಿಮಾನ ನಿಲ್ದಾಣದ ಮೇಲೆ ಕಳೆದ ಶುಕ್ರವಾರ ದಾಳಿ ನಡೆದಿತ್ತು.
ಇಸ್ರೇಲ್ ಸೇನೆ ಲೆಬನಾನ್‌ನಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದೆ. ಹಿಜ್ಬುಲ್ಲಾ ಸಂಘಟನೆಯ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುವ 'ಅಲ್- ಖರ್ದ್ ಅಲ್- ಹಸನ್' ಕಚೇರಿಯನ್ನು ಗುರಿಯಾಗಿಸಿ ಮಂಗಳವಾರ ದಾಳಿ ನಡೆಸಿದೆ.
ಪೀಟ್ ಹೆಗ್ಸೆತ್ ಅಮೆರಿಕದ ರಕ್ಷಣಾ ಕಾರ್ಯದರ್ಶಿಸಂಘರ್ಷ ಆರಂಭವಾದ ಬಳಿಕ ಇರಾನ್ ಮೇಲೆ ನಮ್ಮ ಅತಿದೊಡ್ಡ ದಾಳಿಯನ್ನು ಮಂಗಳವಾರ ನಡೆಸಿದ್ದೇವೆ. ಟ್ರಂಪ್ ನಿರ್ಧರಿಸುವವರೆಗೂ ಈ ಯುದ್ಧ ಮುಂದುವರಿಯಲಿದೆ ಅಲಿ ಲಾರೀಜಾನಿ ಇರಾನ್‌ನ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ- ಟ್ರಂಪ್ ಅವರೇ ನಿಮ್ಮ ಬೆದರಿಕೆಗಳಿಗೆ ಇರಾನ್ ಮಣಿಯದು. ನಿಮಗಿಂತ ದೊಡ್ಡವರಿಗೂ ಇರಾನ್ ಅನ್ನು ನಾಶಪಡಿಸಲಾಗದು. ನೀವೇ ನಾಶವಾಗಿ ಹೋಗದಂತೆ ಜಾಗರೂಕರಾಗಿರಿ
- ದಿನದ ಬೆಳವಣಿಗೆ...
* ಇರಾನ್‌ಗೆ ಮಾನವೀಯ ನೆರವು ಸಾಮಗ್ರಿ ಕಳುಹಿಸಿರುವುದಾಗಿ ಅಜರ್‌ಬೈಜಾನ್ ಹೇಳಿದೆ. ಅಕ್ಕಿ ಸಕ್ಕರೆ ಔಷಧ ಸೇರಿದಂತೆ ಅಗತ್ಯ ಸಾಮಗ್ರಿಗಳು ಇದರಲ್ಲಿ ಒಳಗೊಂಡಿವೆ.
* ಟರ್ಕಿಯಲ್ಲಿರುವ ತನ್ನ ನೆಲೆಗಳನ್ನು ರಕ್ಷಿಸಲು 'ನ್ಯಾಟೊ' ಹೆಚ್ಚುವರಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸುತ್ತಿದೆ ಎಂದು ಟರ್ಕಿ ರಕ್ಷಣಾ ಸಚಿವಾಲಯ ತಿಳಿಸಿದೆ.
* ಸಂಘರ್ಷ ಆರಂಭವಾದ ಬಳಿಕ ಇರಾನ್‌ನಲ್ಲಿ 1230 ಲೆಬನಾನ್‌ನಲ್ಲಿ 397 ಮತ್ತು ಇಸ್ರೇಲ್‌ನಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಏಳು ಯೋಧರು ಬಲಿಯಾಗಿದ್ದಾರೆ.
ಟ್ರಂಪ್ ತದ್ವಿರುದ್ಧ ಹೇಳಿಕೆ...
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧ ಎಷ್ಟು ದಿನ ಮುಂದುವರಿಯಬಹುದು ಎಂಬ ಬಗ್ಗೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಸೋಮವಾರ ತಡರಾತ್ರಿ ರಿಪಬ್ಲಿಕನ್ ಪಕ್ಷದ ಸಂಸದರ ಜತೆ ಮಾತನಾಡುವಾಗ ಯುದ್ಧವು 'ಶೀಘ್ರ'ದಲ್ಲೇ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ.
ಆದರೆ ಕೆಲವೇ ಗಂಟೆಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್‌ನಲ್ಲಿ ಇರಾನ್ ಮೇಲಿನ ದಾಳಿಯನ್ನು ಹೆಚ್ಚಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 'ಹೊರ್ಮುಜ್ ಜಲಸಂಧಿಯನ್ನು ಮುಚ್ಚಲು ಪ್ರಯತ್ನಿಸಿದರೆ ಅಮೆರಿಕವು ಅವರಿಗೆ (ಇರಾನ್) ಈಗ ನೀಡಿದ್ದಕ್ಕಿಂತ 20 ಪಟ್ಟು ಅಧಿಕ ಪೆಟ್ಟು ಕೊಡಲಿದೆ' ಎಂದಿದ್ದಾರೆ.
'ಕದನ ವಿರಾಮ ಬಯಸುತ್ತಿಲ್ಲ' 'ಈ ಸಮಯದಲ್ಲಿ ನಾವು ಖಂಡಿತವಾಗಿಯೂ ಕದನ ವಿರಾಮವನ್ನು ಬಯಸುತ್ತಿಲ್ಲ' ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಹೇಳಿದ್ದಾರೆ. 'ಆಕ್ರಮಣ ನಡೆಸಿದವರಿಗೆ ತಕ್ಕ ಪಾಠ ಕಲಿಯಲು ಅವರ ಮುಖಕ್ಕೆ ಗುದ್ದಬೇಕು ಎಂದು ನಾವು ಬಯಸುತ್ತೇವೆ. ಹಾಗಾದರೆ ಅವರು ಮತ್ತೆ ಎಂದಿಗೂ ಇರಾನ್ ಮೇಲೆ ದಾಳಿ ಮಾಡುವ ಬಗ್ಗೆ ಯೋಚಿಸುವುದಿಲ್ಲ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್- ಪುಟಿನ್ ಮಾತುಕತೆ
ಮಾಸ್ಕೊ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಸೋಮವಾರ ತಡರಾತ್ರಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲೇ ಈ ಇಬ್ಬರು ನಾಯಕರು ಚರ್ಚಿಸಿದ್ದಾರೆ.
'ಸುಮಾರು ಒಂದು ಗಂಟೆ ನಡೆದ ಮಾತುಕತೆ ವೇಳೆ ಉಭಯ ನಾಯಕರು ಅಮೆರಿಕ-ಇರಾನ್ ಯುದ್ಧ ಹಾಗೂ ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚಿಸಿದರು' ಎಂದು ಕ್ರೆಮ್ಲಿನ್‌ನ ವಿದೇಶಾಂಗ ನೀತಿಯ ಸಹಾಯಕ ಯೂರಿ ಉಶಕೊವ್ ತಿಳಿಸಿದರು.
'ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಪುಟಿನ್ ಅವರು ತಮ್ಮ ನಿಲುವನ್ನು ಟ್ರಂಪ್ ಅವರ ಮುಂದಿಟ್ಟರು. ಗಲ್ಫ್ ರಾಷ್ಟ್ರಗಳ ನಾಯಕರು ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಕಳೆದ ವಾರ ನಡೆಸಿದ ಮಾತುಕತೆಯ ವಿವರಗಳನ್ನೂ ಟ್ರಂಪ್ ಅವರಿಗೆ ನೀಡಿದರು' ಎಂದು ಹೇಳಿದರು.

