ಕಾಬೂಲ್: ಇಲ್ಲಿನ ಮಾದಕವಸ್ತು ವ್ಯಸನಮುಕ್ತಿ ಹಾಗೂ ಪುನಃಶ್ಚೇತನ ಚಿಕಿತ್ಸಾ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂಬುದಾಗಿ ನಾರ್ವೆ ರೆಫ್ಯೂಜಿ ಕೌನ್ಸಿಲ್ (ಎನ್‌ಆರ್‌ಸಿ) ಎಂಬ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ) ಬುಧವಾರ ಹೇಳಿದೆ.
ಪಾಕಿಸ್ತಾನ ನಡೆಸಿದ ಈ ದಾಳಿಯಲ್ಲಿ ಸುಮಾರು 400 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಗಾನಿಸ್ತಾನ ಸರ್ಕಾರ ಮಂಗಳವಾರ ಆರೋಪಿಸಿತ್ತು. ಆ ಬಳಿಕ, ಇದೇ ಮೊದಲ ಬಾರಿ ಸ್ವತಂತ್ರ ಸಂಸ್ಥೆಯೊಂದು ಸಾವಿನ ಸಂಖ್ಯೆಯನ್ನು ದೃಢಪಡಿಸಿದಂತಾಗಿದೆ.
ಎನ್‌ಆರ್‌ಸಿ ನಿರ್ದೇಶಕ ಜಾಕೋಪೊ ಕ್ಯಾರಿಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಚಿಕಿತ್ಸಾ ಕೇಂದ್ರದ ಬಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಮ್ಮ ತಂಡಗಳು ತೊಡಗಿಕೊಂಡಿವೆ. ನಾವು ಕಂಡಂತೆ ಹಾಗೂ ನಮ್ಮಂತೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಂದ ಪಡೆದ ಮಾಹಿತಿ ಪ್ರಕಾರ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ' ಎಂದಿದ್ದಾರೆ.
ಮತ್ತೊಂದೆಡೆ, ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ನೆರವು ಘಟಕವು, ಚಿಕಿತ್ಸಾ ಕೇಂದ್ರದ ಮೇಲಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು 143 ಎಂದು ಹೇಳಿದೆ.

