ಆಲಪ್ಪುಳ : 'ಆಡಳಿತಾರೂಢ ಸಿಪಿಎಂ ಹಾಗೂ ಬಿಜೆಪಿ ನಡುವಿನ ಯಾವುದೇ ಒಪ್ಪಂದವು ವಿಧಾನಸಭಾ ಚುನಾವಣೆಯಲ್ಲಿ ಫಲ ನೀಡುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷವು ಜನರೊಂದಿಗೆ ಒಪ್ಪಂದ ಮಾಡಿಕೊಂಡಿದೆ' ಎಂದು ಸಂಸದ ಶಶಿ ತರೂರ್ ಪ್ರತಿಪಾದಿಸಿದ್ದಾರೆ.
ಕಾಯಂಕುಲಂನಲ್ಲಿ ಶುಕ್ರವಾರ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, 'ಅಂತಹ ಯಾವುದೇ ಒಳಒಪ್ಪಂದ ಏರ್ಪಟ್ಟಿದ್ದರೆ ಅದು ಸಿಪಿಎಂ ಮತ್ತು ಬಿಜೆಪಿ ನಡುವೆ ಮಾತ್ರ ಇರಲು ಸಾಧ್ಯ' ಎಂದು ಹೇಳಿದ್ದಾರೆ.
'ಎಡಪಕ್ಷಗಳ ಗುರಿ ಅಧಿಕಾರದಲ್ಲಿ ಮುಂದುವರಿಯುವುದು. ಬಿಜೆಪಿಯ ಗುರಿ ಕಾಂಗ್ರೆಸ್ ಅನ್ನು ನಿರ್ಮೂಲನೆ ಮಾಡುವುದು. ಆದ್ದರಿಂದ ಯಾವುದೇ ಒಪ್ಪಂದವಿದ್ದರೆ, ಅದು ಎಡಪಕ್ಷಗಳು ಮತ್ತು ಬಿಜೆಪಿ ನಡುವೆ ಇರುತ್ತದೆ' ಎಂದು ತಿಳಿಸಿದ್ದಾರೆ.
'ಆಡಳಿತ ವಿರೋಧಿ ಮತಗಳು ವಿಭಜನೆಯಾದರೆ ಅದರ ಪ್ರಯೋಜನ ಪಡೆಯಬಹುದು ಎಂಬ ನಂಬಿಕೆ ಎಡಪಕ್ಷಗಳದ್ದು. ಬಿಜೆಪಿಯು ಕಾಂಗ್ರೆಸ್‌ನ ಮತಗಳನ್ನು ಪಡೆದರೆ, ಅದರ ಪ್ರಯೋಜನ ಎಡಪಕ್ಷಗಳಿಗೆ ಆಗುತ್ತದೆ ಎಂಬುದು ಅವರಿಗೆ ಗೊತ್ತಿದೆ' ಎಂದು ಹೇಳಿದ್ದಾರೆ.
'ಏನೇ ಒಪ್ಪಂದ ನಡೆದರೂ, ಬಿಜೆಪಿಗೆ ಮತ ಹಾಕುವುದು ವ್ಯರ್ಥ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿ ಎರಡು ಅಥವಾ ಮೂರು ಸ್ಥಾನಗಳನ್ನು ಗೆದ್ದರೂ ಸರ್ಕಾರ ರಚಿಸಲು ಸಾಧ್ಯವೇ' ಎಂದು ತರೂರ್ ಪ್ರಶ್ನಿಸಿದ್ದಾರೆ.
'ಈ ಚುನಾವಣೆಯಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಮಾತ್ರ ಸ್ಪರ್ಧೆ ಇದೆ. ಬಹುಪಾಲು ಜನರು ಎಲ್‌ಡಿಎಫ್ ಸರ್ಕಾರವನ್ನು ತೆಗೆದುಹಾಕಲು ಬಯಸುತ್ತಿದ್ದಾರೆ. ಯುಡಿಎಫ್ ಗೆದ್ದರೆ ಜನರೇ ರಾಜ್ಯವನ್ನು ಮುನ್ನಡೆಸುತ್ತಾರೆ. ಕೇರಳದ ಸಮಸ್ಯೆಗಳನ್ನು ಹೊಸ ಸರ್ಕಾರ ಪರಿಹರಿಸುತ್ತದೆ. ಹೀಗಾಗಿ, ಜನರು ಯುಡಿಎಫ್‌ಗೆ ಮತ ಹಾಕಬೇಕು' ಎಂದು ಮನವಿ ಮಾಡಿದ್ದಾರೆ.

