ಗಾಂಧಿನಗರ: 7 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ಗುಜರಾತ್ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ.
ಸಮಾನತೆ ಖಚಿತಪಡಿಸುವಲ್ಲಿ ಇದೊಂದು ಅಭೂತಪೂರ್ವ ಸುಧಾರಣೆ ಎಂದು ಆಡಳಿತಾರೂಢ ಬಿಜೆಪಿ ಹೇಳಿದರೆ, ಮಸೂದೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್, ಇದು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು, ಮುಸ್ಲಿಂ ವಿರೋಧಿ ಮಸೂದೆ ಎಂದು ಆರೋಪಿಸಿದೆ.
ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿ ವರದಿ ನೀಡಿ ವಾರದ ಬಳಿಕ ಮಂಗಳವಾರ (ಮಾರ್ಚ್ 24) ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಸೂದೆಯನ್ನು ಮಂಡಿಸಿದ್ದರು. ಈ ಮಸೂದೆಯು ರಾಜ್ಯದ ಎಲ್ಲ ಧರ್ಮದವರ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಸಹಜೀವನ ಕುರಿತಂತೆ ಏಕರೂಪದ ಕಾನೂನು ಚೌಕಟ್ಟನ್ನು ನೀಡುತ್ತದೆ.
ಬಹುಮತದ ಮೂಲಕ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಲಾಗಿದೆ. ಇದನ್ನು ವಿರೋಧಿಸಿರುವ ಕಾಂಗ್ರೆಸ್ ಮತ್ತು ಎಎಪಿ ಮಸೂದೆಯನ್ನು ಸದನ ಸಮಿತಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿದ್ದವು.

