ನವದೆಹಲಿ: ಮಾರುಕಟ್ಟೆಯಲ್ಲಿ ಹಣ್ಣಿನ ಪಾನೀಯಗಳ ಹೆಸರಿನಲ್ಲಿ ನಡೆಯುತ್ತಿರುವ ದಾರಿತಪ್ಪಿಸುವ ಬ್ರ್ಯಾಂಡಿಂಗ್ ಮತ್ತು ಸುಳ್ಳು ಜಾಹೀರಾತು ಪ್ರವೃತ್ತಿಯ ಕುರಿತಾಗಿ ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ರಾಜ್ಯಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದು, ಪ್ಯಾಕ್ ಮಾಡಲಾದ ಅನೇಕ ಜ್ಯೂಸ್ ಉತ್ಪನ್ನಗಳು ವಾಸ್ತವದಲ್ಲಿ ಸಕ್ಕರೆ ಸಿರಪ್‌ಗಳಾಗಿವೆ, ಇದರಿಂದಾಗಿ ಲಕ್ಷಾಂತರ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.
ಹಣ್ಣಿನ ಚಿತ್ರ, ಒಳಗೆ ಸಕ್ಕರೆ!
ಜ್ಯೂಸ್ ತಯಾರಿಕಾ ಕಂಪನಿಗಳ ಮಾರ್ಕೆಟಿಂಗ್ ತಂತ್ರಗಳನ್ನು ಕಟುವಾಗಿ ಟೀಕಿಸಿದ ಚಡ್ಡಾ, ಗ್ರಾಹಕರು, ವಿಶೇಷವಾಗಿ ಯುವಜನರು ತಾವು ಆರೋಗ್ಯಕರ ಪಾನೀಯ ಸೇವಿಸುತ್ತಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅನೇಕ ಬ್ರ್ಯಾಂಡ್‌ಗಳು ಪ್ಯಾಕೆಟ್‌ನ ಮುಂಭಾಗದಲ್ಲಿ ತಾಜಾ ಹಣ್ಣುಗಳ ಆಕರ್ಷಕ ಚಿತ್ರಗಳನ್ನು ಹಾಕಿ, ಹಿಂಭಾಗದಲ್ಲಿ ಅತಿ ಸಣ್ಣ ಅಕ್ಷರಗಳಲ್ಲಿ ಇದು ಕೇವಲ ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಎಂದು ಹಕ್ಕು ನಿರಾಕರಣೆ (Disclaimer) ಮುದ್ರಿಸುತ್ತವೆ. ಇದು ದೃಶ್ಯ ಮಾಧ್ಯಮದ ಮೂಲಕ ಗ್ರಾಹಕರನ್ನು ವಂಚಿಸುವ ತಂತ್ರ ಎಂದು ಕಿಡಿಕಾರಿದರು.
ಕಾಯಿಲೆ ಭೀತಿ
ಇಂತಹ ಮೋಸದ ಅಭ್ಯಾಸಗಳು ಭಾರತದಲ್ಲಿ ಮಧುಮೇಹ ಮತ್ತು ಬೊಜ್ಜಿನಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತಿವೆ ಎಂದು ಚಡ್ಡಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಹಣ್ಣಿನ ರಸದ ಹೆಸರಿನಲ್ಲಿ ಸಕ್ಕರೆ, ಸಾಂದ್ರೀಕೃತ ದ್ರವ ಮತ್ತು ಸಂರಕ್ಷಕಗಳ ಮಿಶ್ರಣವನ್ನು ನೀಡಿ ಮಕ್ಕಳ ಆರೋಗ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ದೂರಿದ್ದಾರೆ.
ಆಹಾರ ಸುರಕ್ಷತೆ ಮತ್ತು ಲೇಬಲಿಂಗ್‌ನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆಯೇ ಎಂದು ಪ್ರಶ್ನಿಸಿರುವ ರಾಘವ್ ಚಡ್ಡಾ, ಉತ್ಪನ್ನಗಳಲ್ಲಿರುವ ಸಕ್ಕರೆಯ ಪ್ರಮಾಣವನ್ನು ಪ್ಯಾಕೆಟ್‌ನ ಮುಂಭಾಗದಲ್ಲೇ ಸ್ಪಷ್ಟವಾಗಿ ಮತ್ತು ದೊಡ್ಡದಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು, ನಿಜವಾದ ಹಣ್ಣಿನ ರಸ ಮತ್ತು ಸಕ್ಕರೆ ಮಿಶ್ರಿತ ಪಾನೀಯಗಳ ನಡುವೆ ಸ್ಪಷ್ಟ ವರ್ಗೀಕರಣ ಇರಬೇಕು, ತಾಂತ್ರಿಕ ನಿಯಮಗಳನ್ನು ಪಾಲಿಸುತ್ತಲೇ ಗ್ರಾಹಕರನ್ನು ದೃಶ್ಯಗಳ ಮೂಲಕ ದಾರಿ ತಪ್ಪಿಸುವ ಜಾಹೀರಾತು ಪದ್ಧತಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

