ನವದೆಹಲಿ: ಲೋಕಸೆಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ಇಂದು (ಮಂಗಳವಾರ) ಅವಿಶ್ವಾಸ ನಿರ್ಣಯವನ್ನು ಮಂಡಿಸಿತು.
ಈ ನಿರ್ಣಯದ ಕುರಿತು ಚರ್ಚೆ ನಡೆಯುವಾಗ ಸ್ಪೀಕರ್ ಸ್ಥಾನವನ್ನು ಯಾರು ವಹಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕಾವೇರಿದ ಚರ್ಚೆ ನಡೆಯಿತು.
ಬಿರ್ಲಾ ಅವರನ್ನು ಪದಚ್ಯುತಗೊಳಿಸಬೇಕೆಂದು ಕೋರಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ನಿರ್ಣಯ ಮಂಡಿಸಿದರು. ಸಂಸದರಾದ ಕೆ.ಸುರೇಶ್ ಮತ್ತು ಮಲ್ಲು ರವಿ ಕೂಡ ನಿರ್ಣಯ ಮಂಡಿಸಿದರು.
ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಪೀಠದಲ್ಲಿ ಜಗದಾಂಬಿಕಾ ಪಾಲ್ ಇರುವುದನ್ನು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದರು.
ಈ ನಡುವೆ ವಿರೋಧ ಪಕ್ಷಗಳ ಸದಸ್ಯರ ಆರೋಪಗಳಿಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷಗಳ ಸದಸ್ಯರು ಸದನದ ಘನತೆಯನ್ನು ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
'ಪಕ್ಷಪಾತ ಧೋರಣೆಯಿಂದ ವರ್ತಿಸಿದ್ದಾರೆ' ಎಂಬ ಆರೋಪದ ಮೇರೆಗೆ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ಪದಚ್ಯುತಿಗೊಳಿಸುವ ನಿರ್ಣಯವನ್ನು ಮಂಡಿಸಲು ವಿರೋಧ ಪಕ್ಷದ ಕನಿಷ್ಠ 118 ಸಂಸದರು ನೋಟಿಸ್ ನೀಡಿದ್ದರು.

