ಪಟ್ನಾ: ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಇವರ ಜೊತೆಗೆ ಇತರ ಮೂವರು ಅಭ್ಯರ್ಥಿಗಳನ್ನು ಕೂಡ ಎನ್‌ಡಿಎ ಕಣಕ್ಕಿಳಿಸಿದ್ದು, ಎಲ್ಲ ಐದು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ವಿರೋಧ ಪಕ್ಷ ಆರ್‌ಜೆಡಿ ಕೂಡ ತನ್ನ ಉಮೇದುವಾರನನ್ನು ಕಣಕ್ಕಿಳಿಸಿದೆ.
ನಿತೀಶ್ ಕುಮಾರ್, ನಿತಿನ್ ನವೀನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ನಾಮಪತ್ರಗಳನ್ನು ಸಲ್ಲಿಸಿದರು.
ಎನ್‌ಡಿಎದ ಇತರ ಅಭ್ಯರ್ಥಿಗಳಾದ ಕೇಂದ್ರ ಸಚಿವ ರಾಮನಾಥ್ ಠಾಕೂರ್(ಜೆಡಿಯು), ಆರ್‌ಎಲ್‌ಎಂ ಅಧ್ಯಕ್ಷ ಉಪೇಂದ್ರ ಕುಶ್ವಾಹ, ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವೇಶ್ ಕುಮಾರ್ ಕೂಡ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕೇಂದ್ರ ಸಚಿವ ಠಾಕೂರ್ ಅವರು 'ಹ್ಯಾಟ್ರಿಕ್ ಸಾಧನೆ' ದಾಖಲಿಸುವ ಗುರಿ ಹೊಂದಿದ್ದರೆ, ಕುಶ್ವಾಹ ಸತತ ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸುವ ವಿಶ್ವಾಸ ಹೊಂದಿದ್ದಾರೆ. ಮಾಜಿ ಶಾಸಕರಾದ ಶಿವೇಶ್ ಇದೇ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ಆರ್‌ಜೆಡಿಯ ಸಂಸದ ಅಮರೇಂದ್ರ ಧರಿ ಸಿಂಗ್, ಪಕ್ಷದ ಅಧ್ಯಕ್ಷ ತೇಜಸ್ವಿ ಯಾದವ್ ಹಾಗೂ ಇತರ ನಾಯಕರೊಂದಿಗೆ ವಿಧಾನಸಭೆ ಸಚಿವಾಲಯಕ್ಕೆ ತೆರಳಿ, ನಾಮಪತ್ರ ಸಲ್ಲಿಸಿದರು. ಅವರು ಉದ್ಯಮಿಯೂ ಆಗಿದ್ದಾರೆ.
ರಾಮನಾಥ್ ಠಾಕೂರ್ ಕೇಂದ್ರ ಸಚಿವ ಜೆಡಿಯು ನನ್ನ ಮೇಲೆ ನಂಬಿಕೆ ಇಟ್ಟು ಮೂರು ಬಾರಿ ರಾಜ್ಯಸಭೆಗೆ ಕಳುಹಿಸಿದೆ. ವಿಧಾನಸಭೆ ಸದಸ್ಯನಾಗಿ 10 ವರ್ಷ ವಿಧಾನ ಪರಿಷತ್ತಿನ ಸದಸ್ಯನಾಗಿ 12 ವರ್ಷ ಸೇವೆ ಸಲ್ಲಿಸಿರುವೆ. ಇದಕ್ಕಾಗಿ ಪಕ್ಷಕ್ಕೆ ಕೃತಜ್ಞನಾಗಿರುವೆ. ಬಿಹಾರ ಅಭಿವೃದ್ಧಿಪಡಿಸುವ ನಿತೀಶ್ ಕುಮಾರ್ ಪ್ರಯತ್ನಗಳಿಗೆ ನಾನು ಕೈಜೋಡಿಸುವೆ ಉಪೇಂದ್ರ ಕುಶ್ವಾಹನಿತೀಶ್ ಕುಮಾರ್ ಕೂಡ ರಾಜ್ಯಸಭೆ ಪ್ರವೇಶಿಸುತ್ತಿರುವುದು ಸಂತಸದ ವಿಚಾರ. ನಮ್ಮ ಅಣ್ಣನ ಜೊತೆಗೆ ಕೆಲಸ ಮಾಡುವ ಅವಕಾಶವೂ ನನಗೆ ಲಭಿಸುತ್ತಿದೆ
* ಮಾರ್ಚ್ 6: ನಾಮಪತ್ರಗಳ ಪರಿಶೀಲನೆ
* ಮಾರ್ಚ್ 9: ನಾಮಪತ್ರ ಹಿಂಪಡೆಯಲು ಕೊನೆಯ ದಿನ
* ಮಾರ್ಚ್ 16: ಮತದಾನ (ಒಂದು ವೇಳೆ ಎಲ್ಲ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಲ್ಲಿ)

