ವಾಷಿಂಗ್ಟನ್: ಅಮೆರಿಕ ವಾಯುಪಡೆಗೆ ಸೇರಿದ ಕೆಸಿ-135 ವಿಮಾನ ಪಶ್ಚಿಮ ಇರಾಕ್‌ನಲ್ಲಿ ಪತನಗೊಂಡಿದ್ದು ನಾಲ್ವರು ಸಿಬ್ಬಂದಿ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್‌ನಲ್ಲಿ ವಿಮಾನ ಪತನದ ಬಗ್ಗೆ ಖಚಿತಪಡಿಸಿದೆ.
ಹಲವು ವರ್ಷಗಳಿಂದ ಕೆಸಿ-135 ವಿಮಾನ ಆಗಸದಲ್ಲಿ ಯುದ್ಧ ವಿಮಾನಗಳಿಗೆ ಇಂಧನ ತುಂಬುವ ಕೆಲಸ ಮಾಡುತ್ತಿತ್ತು ಎಂದು ಅದು ಹೇಳಿದೆ.
ಘಟನೆಗೆ ಕಾರಣವೇನು ಎಂಬುದು ಇನ್ನು ತಿಳಿದು ಬಂದಿಲ್ಲ. ಶತ್ರು ಪಡೆಗಳ ದಾಳಿ ವಿಮಾನ ಪತನಕ್ಕೆ ಕಾರಣವಲ್ಲ ಎಂದು ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ. ಬದುಕುಳಿದಿರುವ ಇಬ್ಬರನ್ನು ರಕ್ಷಿಸುವ ಪ್ರಯತ್ನಗಳು ಮುಂದುವರಿದಿವೆ ಎಂದು ಅದು ಹೇಳಿದೆ.
ಮತ್ತೊಂದು ಯುದ್ಧ ವಿಮಾನಕ್ಕೆ ಆಗಸದಲ್ಲಿ ಇಂಧನ ತುಂಬಿಸುವಾಗ ಈ ದುರಂತ ಸಂಭವಿಸಿದೆ. ಇಂಧನ ತುಂಬಿಸಿಕೊಂಡಿರುವ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇರಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಶಸ್ತ್ರಸಜ್ಜಿತ ಸಂಘಟನೆಗಳ ಒಕ್ಕೂಟವಾದ 'ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್' (ಐಆರ್‌ಐ) ಅಮೆರಿಕದ ವಿಮಾನವನ್ನು ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿದೆ. ಆದರೆ ಐಆರ್‌ಐ ಹೇಳಿಕೆಯನ್ನು ಅಮೆರಿಕ ತಳ್ಳಿಹಾಕಿದೆ. ಯಾವುದೇ ಶತ್ರು ದಾಳಿಯಿಂದ ವಿಮಾನ ಪತನವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇರಾನ್ ಯುದ್ಧದ ಅವಧಿಯಲ್ಲಿ ಅಮೆರಿಕ ಕಳೆದುಕೊಂಡ ನಾಲ್ಕನೇ ವಿಮಾನ ಇದಾಗಿದೆ. ಕಳೆದ ವಾರದಲ್ಲಿ ಎರಡು ಎಫ್-18 ಹಾಗೂ ಒಂದು ಎಫ್-15 ಯುದ್ಧ ವಿಮಾನಗಳು ಪತನವಾಗಿದ್ದವು.
60ರ ದಶಕದಲ್ಲಿ ಬೋಯಿಂಗ್ ಕಂಪನಿಯಿಂದ ನಿರ್ಮಿಸಲಾದ ಕೆಸಿ-135 ವಿಮಾನ ಆಗಸದಲ್ಲಿ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವ ಕೆಲಸ ಮಾಡುತ್ತಿತ್ತು. ದೀರ್ಘ ದೂರದ ಕಾರ್ಯಾಚರಣೆಗಳಲ್ಲಿ ಇದು ಮಹತ್ವದ ಪಾತ್ರವಹಿಸುತ್ತಿತ್ತು.
ಸಾಮಾನ್ಯವಾಗಿ ಈ ವಿಮಾನದಲ್ಲಿ ಪೈಲಟ್, ಸಹಪೈಲಟ್ ಹಾಗೂ ಇಂಧನ ತುಂಬುವ ವ್ಯವಸ್ಥೆಯನ್ನು ನಿಯಂತ್ರಿಸುವ ಸಿಬ್ಬಂದಿ ಸೇರಿ ಮೂವರು ಕಾರ್ಯನಿರ್ವಹಿಸುತ್ತಾರೆ ಎಂದು ಅಮೆರಿಕ ವಾಯುಪಡೆ ತಿಳಿಸಿದೆ.

