ಕೊಚ್ಚಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಆರೋಪಿ ಮುಖ್ಯ ಅರ್ಚಕ ಕಂಡರಾರು ರಾಜೀವರು (ತಂತ್ರಿ) ಅವರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಶುಕ್ರವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
'ವಾಸ್ತವಾಂಶ, ನಿರ್ದಿಷ್ಟ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಂಡರಾರು ರಾಜೀವರು ಅವರಿಗೆ ಜಾಮೀನು ನೀಡಲಾಗಿದೆ' ಎಂದು ಪ್ರತಿಪಾದಿಸಿರುವ ಎಸ್‌ಐಟಿ, ಜಾಮೀನು ರದ್ದುಗೊಳಿಸುವಂತೆ ಕೇಳಿದೆ.
ದೇವಾಲಯದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯ ಕಾರಣ ಕೊಲ್ಲಂನ ವಿಚಾರಣಾ ಆಯುಕ್ತ ಮತ್ತು ವಿಚಕ್ಷಣ ನಾಯಾಲಯದ ವಿಶೇಷ ನ್ಯಾಯಾಧೀಶ ಫೆಬ್ರುವರಿ 18ರಂದು ಆರೋಪಿಯಾದ ಮುಖ್ಯ ಅರ್ಚಕ ಕಂಡರಾರರು ರಾಜೀವರು ಅವರಿಗೆ ಜಾಮೀನು ನೀಡಿದ್ದರು.
ದೇವಾಲಯದ ದ್ವಾರಪಾಲಕ ವಿಗ್ರಹಗಳು ಮತ್ತು ಗರ್ಭಗುಡಿಯ ಬಾಗಿಲು ಚೌಕಟ್ಟುಗಳಿಂದ ಚಿನ್ನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

