ಕಣ್ಣೂರು: ತಿಮಿರಿ ಬಾಂಬ್ ದಾಳಿ ಪ್ರಕರಣದಲ್ಲಿ ಕೇರಳದ ಕಣ್ಣೂರಿನ ತಳಿಪರಂಬ ನ್ಯಾಯಾಲಯ ಶನಿವಾರ 10 ಮಂದಿ ಸಿಪಿಎಂ ಕಾರ್ಯಕರ್ತರಿಗೆ 25 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಅಲಕೋಡೆ ಸಮೀಪದ ತಿಮಿರಿಯಲ್ಲಿ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲೆ 2011ರಲ್ಲಿ ಬಾಂಬ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ.ಎನ್. ಪ್ರಶಾಂತ್ ಈ ತೀರ್ಪು ನೀಡಿದ್ದಾರೆ.
ಎರಡನೇ ದೋಷಿ ''ಉಡುಂಬು ಬಿನು'' ಎಂದು ಕರೆಯಲಾಗುವ ಟಿ.ವಿ. ಬಿನು ಸೇರಿದಂತೆ ಎಲ್ಲಾ 10 ಮಂದಿ ದೋಷಿಗಳಿಗೆ 25 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಆದರೆ 9 ಮಂದಿ ದೋಷಿಗಳಿಗೆ ಏಕಕಾಲದಲ್ಲಿ ಶಿಕ್ಷೆ ಅನುಭವಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಅವರ ಜೈಲು ಶಿಕ್ಷೆಯ ಅವಧಿ 10 ವರ್ಷಕ್ಕೆ ಇಳಿಕೆಯಾಗಿದೆ.
ಪಿ.ವಿ. ಬಾಬುರಾಜ್, ಎಂ.ಕೆ. ಪ್ರದೀಪ್ ಕುಮಾರ್, ಪಿ.ಪಿ. ಸತ್ಯನ್, ಇ.ವಿ. ವಿನೋದ್ ಕುಮಾರ್, ಪಲೇರಿ ವಿಜಯನ್, ಕೆ.ಪಿ. ಸುರೇಶ್, ಟೋಬಿ, ಜನಾರ್ದನ ಹಾಗೂ ಶಿವಪ್ರಕಾಶ್ ಶಿಕ್ಷೆಗೆ ಒಳಗಾದವರಾಗಿದ್ದಾರೆ.

