ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಎರಡೂವರೆ ವರ್ಷದ ಮಗುವನ್ನು ಸುಮಾರು 23 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಹೊರತೆಗೆಯಲಾಯಿತು. ಆದರೆ, ದುರದೃಷ್ಟವಶಾತ್ ಮಗು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಜ್ಜಯಿನಿ ಜಿಲ್ಲಾ ಕೇಂದ್ರದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಝಲಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ಸಂಜೆ 7.30ರ ಸುಮಾರಿಗೆ ಭಗೀರಥ ಎಂಬ ಪುಟ್ಟ ಮಗು ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದಿದ್ದ.
ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸೇರಿದಂತೆ ವಿವಿಧ ತಂಡಗಳು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿದ್ದವು. ಸುಮಾರು 60ರಿಂದ 65 ಅಡಿ ಅಳದಲ್ಲಿ ಮಗು ಸಿಲುಕಿಕೊಂಡಿತ್ತು.
ಸಾವು ಖಚಿತಪಡಿಸಿದ ವೈದ್ಯರು:
ಶುಕ್ರವಾರ ಸಂಜೆ ಮಗುವನ್ನು ಹೊರತೆಗೆಯಲಾಯಿತು. ಮಗುವಿನಲ್ಲಿ ಯಾವುದೇ ಚಲನೆ ಇಲ್ಲದ ಕಾರಣ ತಕ್ಷಣ ಆಯಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪರೀಕ್ಷೆಯ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

