HEALTH TIPS

₹27 ಸಾವಿರ ಕೋಟಿ ನಿವ್ವಳ ಮೌಲ್ಯ: ಆಯಪಲ್‌ನಲ್ಲಿ ಟಿಮ್ ಕುಕ್ ಸಂಪಾದನೆ ಹೀಗಿದೆ..

 15 ವರ್ಷಗಳಿಂದ ಆಯಪಲ್ ಕಂಪನಿ ಸಿಇಒ ಆಗಿರುವ ಟಿಮ್ ಕುಕ್, ಐಫೋನ್, ಮ್ಯಾಕ್‌ಬುಕ್ ಸೇರಿದಂತೆ ಜಗತ್ತಿನ ಪ್ರೀಮಿಯಂ ಸ್ಮಾರ್ಟ್‌ ಫೋನ್, ಲ್ಯಾಪ್‌ಟಾಪ್ ಉದ್ಯಮದಲ್ಲಿ ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದವರು. ಐಫೋನ್ ಹೊಂದುವುದೇ ಪ್ರತಿಷ್ಠೆ ಎಂಬ ಮಟ್ಟಕ್ಕೆ ಅದನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.


1998ರಲ್ಲಿ ಆಯಪಲ್‌ ಸಂಸ್ಥೆಗೆ ಸೇರಿದ್ದ ಕುಕ್, ಹಲವು ಹುದ್ದೆಗಳನ್ನು ಅಲಂಕರಿಸಿ ತಮ್ಮ ಯಶಸ್ವಿ ಕಾರ್ಯವೈಖರಿ ಮೂಲಕ ಸಿಇಒ ಹುದ್ದೆಗೇರಿದ್ದರು. 2011ರಲ್ಲಿ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅನಾರೋಗ್ಯದಿಂದ ಹುದ್ದೆ ತೊರೆದ ಬಳಿಕ ಸಿಇಒ ಆಗಿ ನೇಮಕವಾಗಿದ್ದ ಕುಕ್, ಆಯಪಲ್ ಸಂಸ್ಥೆ ಬೆಳವಣಿಗೆ, ಪೂರೈಕೆ ಸರಪಳಿ, ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಆಯಪಲ್‌ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುವ ಮತ್ತು ಅದರ ಷೇರುಗಳ ಮೌಲ್ಯದ ಆಧಾರದ ಮೇಲೆ ಕಂಪನಿಯ ಮೌಲ್ಯವನ್ನು ಸುಮಾರು 4 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಿಸಿದ ಕೀರ್ತಿ ಕುಕ್‌ಗೆ ಸಲ್ಲುತ್ತದೆ. ಆಯಪಲ್ ಉತ್ಪನ್ನಗಳಿಗೆ ಚೀನಾವನ್ನು ಪ್ರಾಥಮಿಕ ಉತ್ಪಾದನಾ ನೆಲೆಯನ್ನಾಗಿ ಮಾಡಿದ ತಂತ್ರದ ಮಾಸ್ಟರ್ ಮೈಂಡ್ ಅವರೇ. ಈಗ ಹೆಚ್ಚಿನ ಐಫೋನ್‌ಗಳು ಗುತ್ತಿಗೆದಾರ ಸಂಸ್ಥೆ ಫಾಕ್ಸ್‌ಕಾನ್ ಮತ್ತು ಚೀನೀ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತವೆ.

ಕಂಪನಿಯ ಅಭ್ಯುದಯದಲ್ಲಿ ಪ್ರಮುಖ ಪಾತ್ರ ವಹಿಸಿದ ಟಿಮ್ ಕುಕ್ ಈಗ ತಮ್ಮ ಅತ್ಯಂತ ಯಶಸ್ವಿ ಹುದ್ದೆಯಿಂದ ನಿರ್ಗಮಿಸುತ್ತಿದ್ದಾರೆ. ಹೊಸತನಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಆಯಪಲ್ ಸಿಇಒ ಹುದ್ದೆಗೆ ಜಾನ್ ಟರ್ನ್ಸ್ ಎಂಬುವವರಿಗೆ ಸಿಇಒ ಹೊಣೆ ನೀಡಲು ನಿರ್ಧರಿಸಿದೆ.

ಪ್ರತೀ ವರ್ಷ ಆಯಪಲ್‌ನ ಹೊಸ ಉತ್ಪನ್ನಗಳು ಜಗತ್ತಿಗೆ ಅನಾವರಣಗೊಳ್ಳುವ ಆಯಪಲ್ ಈವೆಂಟ್ ನಡೆಯುವ ಸೆಪ್ಟೆಂಬರ್ ತಿಂಗಳಿನಲ್ಲೇ ಟಿಮ್ ಕುಕ್ ತಮ್ಮ ಹುದ್ದೆಯಿಂದ ನಿರ್ಗಮಿಸಿ ಟರ್ನಸ್ ಅವರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.

'ಆಯಪಲ್‌ನ ಸಿಇಒ ಆಗಿದ್ದು ಮತ್ತು ಅಂತಹ ಅಸಾಧಾರಣ ಕಂಪನಿಯನ್ನು ಮುನ್ನಡೆಸಲು ನನ್ನ ಬಗ್ಗೆ ನಂಬಿಕೆ ಇಟ್ಟಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಸೌಭಾಗ್ಯ'ಎಂದು ಕುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಷ್ಟು ವರ್ಷ ಆಯಪಲ್ ಕಂಪನಿಯಲ್ಲಿ ಸೇವೆ ಸಲ್ಲಿಸಿರುವ ಅವರ ಸಂಭಾವನೆ ಯಾವ ಮಟ್ಟದಲ್ಲಿರಬಹುದು ಎಂಬ ಯೋಚನೆ ಮನಸ್ಸಿಗೆ ಬಂದೇ ಬರುತ್ತದೆ. ಗಮನಾರ್ಹ ಆದಾಯ ಗಳಿಸುತ್ತಿದ್ದ ಆಯಪಲ್ ಸಂಸ್ಥೆ ಕುಕ್ ಅವರಿಗೂ ಉತ್ತಮ ಸಂಭಾವನೆಯನ್ನೇ ನೀಡಿತ್ತು.

ಫೋರ್ಬ್ಸ್‌ನ ರಿಯಲ್ ಟೈಮ್ ದತ್ತಾಂಶದ ಪ್ರಕಾರ, ಟಿಮ್ ಕುಕ್ ಅಂದಾಜು 2.9 ಬಿಲಿಯನ್ ಡಾಲರ್(₹27.19 ಸಾವಿರ ಕೋಟಿ) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. 9 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಈಗ ಮಾರಾಟ ಮಾಡಿದ್ದಾರೆ. ಆಯಪಲ್‌ ಸಂಸ್ಥೆಯಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. ಇದು ಶೇ 1 ಕ್ಕಿಂತ ಕಡಿಮೆ ಪಾಲನ್ನು ಪ್ರತಿನಿಧಿಸುತ್ತದೆ. ಕೆಲ ವರ್ಷಗಳಿಂದ ಅವರು 1 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಆಯಪಲ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಕುಕ್ ಕಂಪನಿಯ ವಿಶ್ವದಾದ್ಯಂತ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷರಾಗಿದ್ದರು. ಅವರ ಸಂಬಳ ವರ್ಷಕ್ಕೆ 5,00,000 ಡಾಲರ್ ಆಗಿತ್ತು. ಸೆಲೆಬ್ರಿಟಿ ನೆಟ್ ವರ್ತ್ ಪ್ರಕಾರ, 2011ರಲ್ಲಿ ಆಯಪಲ್‌ ಸಿಇಒ ಆಗಿ ನೇಮಕಗೊಂಡಾಗ ಅವರ ಸಂಬಳ ವರ್ಷಕ್ಕೆ 9,00,000 ಡಾಲರ್‌ಗೆ ಏರಿತ್ತು.

ಸುಮಾರು ಒಂದು ದಶಕದಿಂದ ಅವರ ಮೂಲ ವೇತನವು ವರ್ಷಕ್ಕೆ 3 ಮಿಲಿಯನ್‌ ಡಾಲರ್‌ನಲ್ಲೇ ನಿಂತಿದೆ. ಕಂಪನಿಯ ನಿವ್ವಳ ಮೌಲ್ಯವು ಗಗನಕ್ಕೇರಿದ್ದರೂ ಸಹ ಅವರ ಮೂಲ ವೇತನ ಹೆಚ್ಚಾಗಿರಲಿಲ್ಲ. ಆಯಪಲ್‌ನ ಸಂಭಾವನೆ ಸಮಿತಿಯು ಅವರ ಮೂಲ ವೇತನವನ್ನು ಸ್ಥಿರವಾಗಿರಿಸಿ, ಷೇರು ಮತ್ತು ನಗದು ಬೋನಸ್‌ಗಳನ್ನು ನೀಡಿದೆ.

3 ಮಿಲಿಯನ್ ಮೂಲ ವೇತನದ ಜೊತೆಗೆ ಕುಕ್ ಅವರು, ಆಯಪಲ್ ತನ್ನ ಆದಾಯ ಮತ್ತು ಕಾರ್ಯಾಚರಣಾ ಆದಾಯದ ಗುರಿಗಳನ್ನು ತಲುಪಿದ ಆಧಾರದ ಮೇಲೆ ಸಾಮಾನ್ಯವಾಗಿ 8 ಮಿಲಿಯನ್ ಡಾಲರ್‌ನಿಂದ 12 ಮಿಲಿಯನ್ ಡಾಲರ್‌ವರೆಗೆ ಇರುವ ನಾನ್ ಈಕ್ವಿಟಿ ಇನ್ಸೆಂಟಿವ್ ಪ್ಲಾನ್ (ನಗದು ಬೋನಸ್) ಅಡಿಯ ಪರಿಹಾರವನ್ನು ಪಡೆದಿದ್ದಾರೆ. ಈ ಮೂಲಕ 2022ರಲ್ಲಿ, ಅವರ ಒಟ್ಟು ಆದಾಯವು 99.4 ಮಿಲಿಯನ್‌ ಡಾಲರ್‌ಗೆ ತಲುಪಿತ್ತು.

2023ರಲ್ಲಿ ತಮ್ಮ ವೇತನ ಪ್ಯಾಕೇಜ್‌ನ ಗಾತ್ರದ ಬಗ್ಗೆ ಪ್ರತಿಕ್ರಿಯೆಯನ್ನು ಅನುಸರಿಸಿ, ಟಿಮ್ ಕುಕ್ ಸ್ವಯಂಪ್ರೇರಿತ ಸಂಭಾವನೆ ಕಡಿತವನ್ನು ಕೋರಿದ್ದರು. ಆಗ ಅವರ ಒಟ್ಟು ಟೇಕ್ ಹೋಮ್ 63.2 ಮಿಲಿಯನ್‌ಗೆ ಇಳಿಯಿತು.

2024ರಲ್ಲಿ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದರಿಂದ ಅವರ ಒಟ್ಟು ಸಂಭಾವನೆ ಶೇ 18 ರಷ್ಟು ಏರಿಕೆಯಾಗಿ 74.6 ಮಿಲಿಯನ್‌ ಡಾಲರ್‌ಗೆ ಏರಿತ್ತು. ಇದರಲ್ಲಿ 3 ಮಿಲಿಯನ್ ಡಾಲರ್ ಮೂಲ ವೇತನ, 58 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳು, 12 ಮಿಲಿಯನ್ ಡಾಲರ್ ಕಾರ್ಯಕ್ಷಮತೆ ಬೋನಸ್‌ ಮತ್ತು 1.5 ಮಿಲಿಯನ್ ಡಾಲರ್ ಇತರ ವೇತನ ಸೇರಿವೆ. 2025ರ ವರೆಗೆ ಅವರ ಒಟ್ಟು ಸಂಭಾವನೆ 74 ಮಿಲಿಯನ್ ಡಾಲರ್‌ನಲ್ಲೇ(₹699 ಕೋಟಿ) ಉಳಿದಿತ್ತು.

'ಆಯಪಲ್ ಸುಮಾರು 350 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣದಿಂದ 4 ಟ್ರಿಲಿಯನ್‌ ಡಾಲರ್‌ಗೆ ಬೆಳೆದಿದೆ. ಇದು ಶೇ 1,000ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ವಾರ್ಷಿಕ ಆದಾಯವು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. 2011ರ ಆರ್ಥಿಕ ವರ್ಷದಲ್ಲಿ 108 ಬಿಲಿಯನ್‌ ಡಾಲರ್‌ನಷ್ಟಿದ್ದ ಆದಾಯ 2025ರ ಆರ್ಥಿಕ ವರ್ಷದ ಹೊತ್ತಿಗೆ 416 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಾಗಿದೆ'ಎಂದು ಆಯಪಲ್‌ನ ಪ್ರಕಟಣೆ ತಿಳಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries